ಖರ್ಗೆ, ತರೂರ್ ಯಾರು ಗೆದ್ದರೂ ರಿಮೋಟ್ ಕಂಟ್ರೋಲ್ ಆಗುವುದಿಲ್ಲ; ರಾಹುಲ್
ತುಮಕೂರು; ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಸ್ಪರ್ಧೆ ಮಾಡಿದ್ದಾರೆ. ಇವರಿಬ್ಬರಲ್ಲಿ ಯಾರು ಗೆದ್ದರೂ ರಿಮೋಟ್ ಕಂಟ್ರೋಲ್ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ತುಮಕೂರಿಗೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅಥವಾ ಶಶಿ ತರೂರ್ ಇಬ್ಬರೂ ಸ್ಥಾನ ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದಾರೆ. ಹಾಗೂ ಇಬ್ಬರೂ ಕಾನೂನು ಮತ್ತು ತಿಳುವಳಿಕೆ ಹೊಂದಿದ್ದಾರೆ. ಹೀಗಾಗಿ ಯಾರೇ ಗೆದ್ದರೂ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಇತಿಹಾಸ ನೋಡಿದರೆ ಬಿಜೆಪಿ, ಆರ್‌ಎಸ್‌ಎಸ್ ಎಲ್ಲಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಬ್ರಿಟಿಷರಿಗೆ ಆರ್‌ಎಸ್‌ಎಸ್ ಸಹಾಯ ಮಾಡ್ತಾ ಇತ್ತು ಎಂದು ರಾಹುಲ್ ಇದೇ ವೇಳೆ ಆರೋಪ ಮಾಡಿದ್ದಾರೆ. ಸಾವರ್ಕರ್ ಸ್ಟೈಫಂಡ್ ಪಡೆದುಕೊಳ್ಳುತ್ತಿದ್ದರು. ಭಾರತವನ್ನು ಒಡೆಯುತ್ತಿರುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದು ರಾಹುಲ್ ಇದೇ ವೇಳೆ ದೂರಿದರು.