ನಾವೂ ಪೇಸಿಎಂ ಟಿ ಶರ್ಟ್ ಧರಿಸ್ತೀವಿ, ಏನು ಮಾಡ್ತೀರೋ ಮಾಡಿ; ಡಿಕೆಶಿ
ಮೈಸೂರು: ಭಾರತ್ ಜೋಡೊ ಯಾತ್ರೆಯಲ್ಲಿ ನಾವೆಲ್ಲರೂ ಪೇಸಿಎಂ ಟಿ-ಶರ್ಟ್ ಧರಿಸಿ ಪಾಲ್ಗೊಳ್ಳುತ್ತೇವೆ. ಬಿಜೆಪಿಯವರು ಅದೇನ್ ಮಾಡ್ತಾರೋ ನೋಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ಗುಂಡ್ಲುಪೇಟೆಯಲ್ಲಿ ಪಾದಯಾತ್ರೆ ವೇಳೆ ಪೇಸಿಎಂ ಟೀಶರ್ಟ್ ಧರಿಸಿದ್ದ ಕಾರ್ಯಕರ್ತನನ್ನು ಬಂಧಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್, ನಾವೂ ಪೇಸಿಎಂ ಟೀಶರ್ಟ್ ಧರಿಸ್ತೀವಿ. ಏನು ಮಾಡ್ತಾರೋ ನೋಡೋಣ ಎಂದು ಹೇಳಿದರು.
ನಮ್ಮ ಕಾರ್ಯಕರ್ತ ಪೇಸಿಎಂ ಟಿ-ಶರ್ಟ್ ಹಾಕಿದ್ದರೆ ಕೇಸ್ ಮಾಡಿದ್ದಾರೆ. ಇಂಥದ್ದಕ್ಕೆಲ್ಲ ನಾವು ಹೆದರುವುದಿಲ್ಲ. ಭಾರತ್ ಜೋಡೊ ಯಾತ್ರೆ ಪಕ್ಷದ ಕಾರ್ಯಕ್ರಮ ಅಲ್ಲ. ಮನಸ್ಸು ಮನಸ್ಸುಗಳನ್ನು ಜೋಡಿಸುವ ಕಾರ್ಯಕ್ರಮ. ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯಲು ಹಾಗೂ ಆತಂಕಗೊಂಡಿರುವ ಜನರಿಗೆ ಧೈರ್ಯ ತುಂಬಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಸರ್ಕಾರ ಶೇ 40ರಷ್ಟು ಕಮಿಷನ್ನಲ್ಲಿ ಮುಳುಗಿದೆ. ರೈತರು ಸೇರಿದಂತೆ ಎಲ್ಲಾ ವರ್ಗದವರೂ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಭ್ರಷ್ಟಾಚಾರ, ಅಶಾಂತಿ, ಮತ್ತೊಂದೆಡೆ ರೈತರ ಸಮಸ್ಯೆ ಹಾಗೂ ನಿರುದ್ಯೋಗ ಕಾಡುತ್ತಿದೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಮ್ಮ ಬೆಳವಣಿಗೆ ಸಹಿಸಲಾಗದೆ ಬಿಜೆಪಿಯವರು ಟೀಕೆ, ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅದಕ್ಕೆ ನಾವು ಹೆದರುವುದಿಲ್ಲ. ಜನರ ಪರವಾಗಿ ಹೋರಾಟ ಮಾಡುವುದನ್ನು ಮುಂದುವರಿಸದೆ ಬಿಡುವುದಿಲ್ಲ ಎಂದರು.