CrimeDistricts

ಬಾಂಬ್‌ ತಯಾರಿಸಿ ಪ್ರಾಯೋಗಿಕ ಸ್ಫೋಟ ನಡೆಸಿದ್ದ ಆರೋಪಿಗಳು..!

ಶಿವಮೊಗ್ಗ; ಐಸಿಸ್‌ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳು ಬಾಂಬ್ ಸಿದ್ಧಪಡಿಸಿ ಕಳೆದ ಆಗಸ್ಟ್‌ನಲ್ಲಿ ತುಂಗಾ ನದಿ ದಂಡೆಯ ಕೆಮ್ಮನಗುಂಡಿಯಲ್ಲಿ ಪ್ರಾಯೋಗಿಕವಾಗಿ ಸ್ಫೋಟಿಸಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದೇ ವೇಳೆ ರಾಷ್ಟ್ರಧ್ವಜ ಸುಟ್ಟು ಅದನ್ನು ವಿಡಿಯೊ ರೆಕಾರ್ಡ್ ಮಾಡಿದ್ದರು. ವಿಧಿ ವಿಜ್ಞಾನ ತಜ್ಞರು ಸ್ಫೋಟಕ್ಕೆ ಸಂಬಂಧಿಸಿದ ಅವಶೇಷಗಳನ್ನು ಹಾಗೂ ಅರೆಬರೆ ಸುಟ್ಟ ತ್ರಿವರ್ಣ ಧ್ವಜ ಹಾಗೂ ವಿಡಿಯೊ ಸ್ಥಳದಿಂದ ಸಂಗ್ರಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಐಸಿಸ್ ಸಂಘಟನೆ ಜೊತೆ ನಂಟು ಆರೋಪದ ಮೇಲೆ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಮಾಝ್ ಮುನೀರ್ ಅಹಮದ್, ಸೈಯದ್ ಯಾಸೀನ್ ಎಂಬುವವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಶಾರೀಕ್ ತಲೆಮರೆಸಿಕೊಂಡಿದ್ದಾನೆ.‌ ಆರೋಪಿಗಳು ಟೆಲಿಗ್ರಾಂ ಆ್ಯಪ್ ಮೂಲಕ ಐಎಸ್ ಸಂಘಟನೆಯ ಅಧಿಕೃತ ಮಾಧ್ಯಮ ಅಲ್–ಹಯತ್‌ನ ಸದಸ್ಯರಾಗಿದ್ದರು. ಸಂಘಟನೆಯ ಪ್ರಚಾರಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಅಲ್ಲಿಂದಲೇ ಸ್ವೀಕರಿಸುತ್ತಿದ್ದರು. ಎಲೆಕ್ಟ್ರಿಕ್ ಎಂಜಿನಿಯರ್ ಆಗಿರುವ ಸೈಯದ್ ಯಾಸೀನ್ ಬಾಂಬ್ ತಯಾರಿಕೆಯ ಬಗ್ಗೆ ಐಎಸ್‌ನಿಂದಲೇ ಮಾಹಿತಿ ಪಡೆದಿದ್ದನು. ಅದಕ್ಕೆ ಬೇಕಿರುವ ಟೈಮರ್ ರಿಲೆ ಸರ್ಕ್ಯೂಟ್‌ಗಳನ್ನು ಅಮೇಜಾನ್ ಮೂಲಕ ಖರೀದಿಸಿದ್ದರು. ಶಿವಮೊಗ್ಗ ನಗರದಲ್ಲಿ 9 ವೋಲ್ಟ್‌ನ ಎರಡು ಬ್ಯಾಟರಿ, ಸ್ವಿಚ್, ವೈರ್‌ಗಳು, ಮ್ಯಾಚ್‌ಬಾಕ್ಸ್ ಸೇರಿದಂತೆ ಉಳಿದ ವಸ್ತುಗಳನ್ನು ಖರೀದಿಸಿದ್ದರು ಎಂದು ತಿಳಿಸಿದರು.

Share Post