Bengaluru

ನಿರುದ್ಯೋಗಿಗಳ ನೋಂದಣಿಗಾಗಿ ಕಾಂಗ್ರೆಸ್‌ನಿಂದ ವೆಬ್‌ಸೈಟ್‌

ಬೆಂಗಳೂರು; ನಿರುದ್ಯೋಗಿಗಳ ನೋಂದಣಿಗಾಗಿ ಕೆಪಿಸಿಸಿಯ ಯುವ ಘಟಕ ಹೊಸ ವೆಬ್‍ಸೈಟ್ ಅನ್ನು ಆರಂಭಿಸಿದೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ವೆಬ್‍ಸೈಟ್ ಆರಂಭಿಸಲಾಗಿದ್ದು, ನಿರುದ್ಯೋಗಿಗಳು ನೋಂದಣಿ ಮಾಡಿಕೊಳ್ಳಲು ಕರೆ ನೀಡಲಾಗಿದೆ.

ವೆಬ್‍ಸೈಟ್ ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣೆ ವೇಳೆ ಭರವಸೆ ನೀಡಿದ್ದ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅದನ್ನು ಈಡೇರಿಸಿಲ್ಲ. ಈಗ ಹೊಸದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 60 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗ ಹೇಳಿದ್ದಾರೆ.

ನಿರುದ್ಯೋಗ, ರೈತರ ಸಮಸ್ಯೆಗಳು ಸೇರಿ ಅನೇಕ ಸವಾಲುಗಳ ಕುರಿತು ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ನಡೆಯುತ್ತಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಸಂಕಟಕ್ಕೆ ಒಳಗಾಗಿದ್ದಾರೆ, ಯಾತ್ರೆಯಲ್ಲಿ ಐದು ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ಇಂದು ಉದ್ಘಾಟನೆಯಾಗಿರುವ ಪ್ರತ್ಯೇಕ ವೆಬ್‍ಸೈಟ್‍ನಲ್ಲಿ ನೈಜ್ಯ ನಿರುದ್ಯೋಗ ಯುವಕರು ನೋಂದಣಿ ಮಾಡಿಕೊಳ್ಳಬೇಕು. ನೋಂದಾಯಿತರ ಮನೆ ಬಾಗಿಲಿಗೆ ಕಾಂಗ್ರೆಸ್ ಕಾರ್ಯಕರ್ತರು ಬರಲಿದ್ದಾರೆ, ಅಗತ್ಯ ನೆರವು ನೀಡಲಿದ್ದಾರೆ. ನಿರುದ್ಯೋಗಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಆಯ್ದ ಕೆಲವರಿಗೆ ರಾಹುಲ್‍ಗಾಂಧಿ ಅವರ ಜೊತೆ ಸಂವಾದ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಭವಿಷ್ಯದಲ್ಲಿ ರಾಹುಲ್‍ಗಾಂಧಿ ಯುವಕರಿಗೆ ಆಶಾ ಕಿರಣವಾಗಲಿದ್ದಾರೆ. ಬಿಜೆಪಿ ಸರ್ಕಾರದ ವೈಪಲ್ಯದಿಂದ ಜನ ಅಸಮದಾನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಬಳಿಕ ಡಿ.ಕೆ.ಶಿವಕುಮಾರ್ ಅವರು ಪಕ್ಷ ಮಹಿಳಾ ಘಟಕದಿಂದ ಆರಂಭಿಸಲಾಗಿರುವ ಸಹಾಯವಾಣಿಗೂ ಚಾಲನೆ ನೀಡಿದರು. ಮಹಿಳೆಯರಿಗೆ ಕಾಂಗ್ರೆಸ್ ಹೆಚ್ಚು ಆದ್ಯತೆ ನೀಡಿದೆ. ಶೇ.33ರಷ್ಟು ರಾಜಕೀಯ ಮೀಸಲಾತಿಗೆ ಸಂಸತ್‍ನಲ್ಲಿ ಮಸೂದೆ ಮಂಡಿಸಲಾಗಿದೆ. ಇಂದಲ್ಲ ನಾಳೆ ಅದು ಜಾರಿಯಾಗಲಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳಾಭಿವೃದ್ಧಿಗೆ ಜಾರಿಗೊಳಿಸಲಾದ ಯೋಜನೆಗಳ ಬಗ್ಗೆ ಸಹಾಯವಾಣಿ ಮಾಹಿತಿ ನೀಡಲಿದೆ ಎಂದರು.

ಮಹಿಳಾ ನಾಯಕತ್ವ ಬೆಳೆಸಲು ಆದ್ಯತೆ ನೀಡಲಾಗಿದೆ. ಮಹಿಳೆ ಸಮಾಜದ ಕಣ್ಣು ಎಂಬ ಸಿದ್ಧಾಂತದ ಅಡಿ ಕೆಲಸ ಮಾಡುತ್ತಿದೆ ಎಂದರು.

Share Post