ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ
ಬೆಂಗಳೂರು; ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ (61) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ರಾತ್ರಿ ಹತ್ತು ಗಂಟೆ ಸುಮಾರಿಗೆ ಅವರನ್ನು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಹಾಗೂ ಸಿಎಂ ಆಗಬೇಕೆಂಬ ಕನಸು ಕಂಡಿದ್ದ ಉಮೇಶ್ ಕತ್ತು ವರ್ಣರಂಜಿತ ರಾಜಕಾರಣಿಯಾಗಿದ್ದರು.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಆಗಿತ್ತು. ಎಂ.ಎಸ್.ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ, ವಿಭಿನ್ನವಾದ ರಾಜಕೀಯ ಪಥದಲ್ಲಿ ಸಾಗಿ ಸುದ್ದಿ ಮಾಡಿದ್ದರು. ಉಮೇಶ್ ಕತ್ತಿಯವರ ತಂದೆ ವಿಶ್ವನಾಥ್ ಕತ್ತಿಯ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿತ್ತು, 1985ರಲ್ಲಿ ಉಮೇಶ್ ಕತ್ತಿಯರವು, ಜನತಾ ಪಕ್ಷದಿಂದ ಶಾಸಕರಾಗಿ ವಿಧಾನಸಭಾ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದರು.
ಅಂದಿನಿಂದ ಇಲ್ಲಿಯವರೆಗೆ 2004ರಲ್ಲಿ ಹೊರತಾಗಿ ಇನ್ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನೇ ಕಂಡಿಲ್ಲ. ಹೀಗಾಗಿ ದಾಖಲೆಯ 8 ಬಾರಿ ಶಾಸಕರಾಗಿದ್ದ ಹೆಮ್ಮೆ ಅವರದ್ದು. ಜನತಾ ಪಕ್ಷದಿಂದ ರಾಜಕೀಯ ಆರಂಭಿಸಿದ್ದ ಉಮೇಶ್ ಕತ್ತಿ, ಭಾರತೀಯ ಜನತಾ ಪಕ್ಷದ ಮೂಲಕ ತಮ್ಮ ರಾಜಕೀಯ ಕೊನೆಗೊಳಿಸಿದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. 1989ರಲ್ಲಿ ಜನತಾದಳದಿಂದ ಜಯಭೇರಿ ಬಾರಿಸಿದ್ದರು.
ಮುಂದಿನ ಚುನಾವಣೆ ಅಂದರೆ 1994ರಲ್ಲೂ ಉಮೇಶ್ ಕತ್ತಿ, ಜನತಾದಳದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿ, ಎಚ್ಡಿ ದೇವೇಗೌಡರ ಸಚಿವ ಸಂಪುಟದಲ್ಲಿ ಸಕ್ಕರೆ ಸಚಿವರಾಗಿ ಕೆಲಸ ಮಾಡಿದರು. ನಂತರ ಜೆಎಚ್ ಪಟೇಲ್ ಸರ್ಕಾರದಲ್ಲೂ ಪ್ರಭಾವಿ ಲೋಕೋಪಯೋಗಿ ಖಾತೆಯನ್ನು ನಿಭಾಯಿಸಿದರು. 1999ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರಿಂದ ದೂರ ಸರಿದ ಉಮೇಶ್ ಕತ್ತಿ, ಜೆಡಿಯುನೊಂದಿಗೆ ಗುರುತಿಸಿಕೊಂಡು, ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದರು.
ಆದರೆ ನಂತರದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಚಿಹ್ನೆಯಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಕತ್ತಿ ಮೊದಲ ಸೋಲಿನ ರುಚಿ ಕಂಡರು, ಇದು ಅವರ ಕೊನೆಯ ಸೋಲು ಆಗಿತ್ತು. ನಂತರ 2008ರಲ್ಲಿ ಮತ್ತೆ ಜೆಡಿಎಸ್ಗೆ ಬಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಆದರೆ ಚುನಾವಣೆ ಬಳಿಕ ನಡೆದ ಆಪರೇಷನ್ ಕಮಲದ ಭಾಗವಾಗಿ ಕತ್ತಿ ಬಿಜೆಪಿ ಸೇರಿದರು.
ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಉಮೇಶ್ ಕತ್ತಿ ಗೆಲುವು ಸಾಧಿಸಿ, ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಬಂಧೀಖಾನೆ, ಕೃಷಿ ಸಚಿವರಾಗಿ ಕೆಲಸ ಮಾಡಿದರು. ನಂತರದ 2013-2018ರ ವಿಧಾನಸಭಾ ಚುನಾವಣೆಯಲ್ಲಿಯೂ ಉಮೇಶ್ ಕತ್ತಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ನಿರಾಯಾಸವಾಗಿ ಗೆದ್ದುಬಂದರು. ನಂತರ ಇತ್ತೀಚಿನ ಯಡಿಯೂರಪ್ಪ ಸರ್ಕಾರದಲ್ಲಿಯೂ ಉಮೇಶ್ ಕತ್ತಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಈಗ ಹಾಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಹಾಗೂ ಅರಣ್ಯ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಉಮೇಶ್ ಕತ್ತಿ ಸ್ಪಷ್ಟ ನಿಲುವು ಹೊಂದಿದ್ದರು, ಪಕ್ಷದ ಆದೇಶ ಹಾಗೂ ನಿಲುವಿನ ವಿರುದ್ಧವಾಗಿ ಆಗಾಗ ಧ್ವನಿ ಎತ್ತುತ್ತಲೇ ಇದ್ದರು. ಭವಿಷ್ಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ, ಆ ರಾಜ್ಯಕ್ಕೆ ನಾನೇ ಮೊದಲ ಮುಖ್ಯಮಂತ್ರಿಯಾಗುತ್ತೇನೆ ಎಂದು ಆಗಾಗ ಮಾಧ್ಯಮದೆದುರು ಹೇಳಿಕೆ ನೀಡುತ್ತಿದ್ದರು, ಇದಲ್ಲದೇ ಅಖಂಡ ಕರ್ನಾಟಕಕ್ಕೂ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡು್ತತಿದ್ದರು.