Bengaluru

ಬೆಂಗಳೂರಿನ ಈ ಸ್ಥಿತಿಗೆ ಕಾಂಗ್ರೆಸ್‌ನ ದುರಾಡಳಿತವೇ ಕಾರಣ; ಸಿಎಂ ಬೊಮ್ಮಾಯಿ

ಬೆಂಗಳೂರು; ಬೆಂಗಳೂರು ಭಾರಿ ಮಳೆಗೆ ತಡೆದುಕೊಳ್ಳಲಾರದಷ್ಟು ದುಸ್ಥಿತಿಗೆ ಬಂದಿದೆ ಅಂದ್ರೆ ಅದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತದ ಅವಧಿಯಲ್ಲಿನ ದುರಾಡಳಿತವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಗರದ ಕೆರೆಗಳು, ಕೆರೆ ಸುತ್ತಲಿನ ನಿರ್ಬಂಧಿತ ಪ್ರದೇಶ, ರಾಜಕಾಲುವೆಗಳ ಮೇಲೆ ಕಟ್ಟಡ ನಿರ್ಮಾಣಕ್ಕೆ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ಅನುಮತಿ ನೀಡಲಾಗಿತ್ತು. ಈ ಕಾರಣದಿಂದಾಗಿಯೇ ಈಗ ಬೆಂಗಳೂರಿನಲ್ಲಿ ಬೃಹತ್‌ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ಆಪಾದಿಸಿದರು.

ಹಿಂದೆ ಅಕ್ರಮವಾಗಿ ಕೆರೆ, ಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು ನಾವು ತೆರವುಗೊಳಿಸುತ್ತಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಎಲ್ಲ ಅಕ್ರಮ ನಿರ್ಮಾಣಗಳನ್ನೂ ತೆರವು ಮಾಡಲಾಗುವುದು ಎಂದು ಹೇಳಿದರು. ಬೆಂಗಳೂರಿನಲ್ಲಿ 90 ವರ್ಷಗಳಲ್ಲೇ ಅತ್ಯಧಿಕ ಮಳೆ ಬಿದ್ದಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ಹೆಚ್ಚಿನ ಮಳೆಯಿಂದ ಕೆರೆಗಳು ತುಂಬಿ ಹರಿಯುತ್ತಿವೆ. ಕೆಲವು ಕೆರೆಗಳು ಒಡೆದಿವೆ. ಇದರಿಂದಾಗಿ ಹೆಚ್ಚಿನ ಸಮಸ್ಯೆಯಾಗಿದೆ. ಜನರ ಸ್ಥಳಾಂತರ ಮತ್ತು ಪರಿಹಾರ ಕಾರ್ಯಾಚರಣೆಗೆ ಅಧಿಕಾರಿಗಳು, ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಬಿಎಂಪಿಯ ಮಹದೇವಪುರ ವಲಯದ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚು ತೊಂದರೆಯಾಗಿದೆ. ಅಲ್ಲಿ 69 ಕೆರೆಗಳಿವೆ. ಎಲ್ಲ ಕೆರೆಗಳು ಭರ್ತಿಯಾಗಿದ್ದು, ಕೆಲವು ಕೆರೆಗಳು ಒಡೆದಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ ಎಂದು ಹೇಳಿದರು. ಯಾವುದೇ ಆರೋಪವಿದ್ದರೂ ತನಿಖೆ: ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯೊಬ್ಬರು ಹುದ್ದೆ ಪಡೆಯಲು ಬಿಜೆಪಿ ಶಾಸಕ ಬಸವರಾಜ ದಢೇಸೂಗೂರ್‌ ಅವರಿಗೆ 15 ಲಕ್ಷ ನೀಡಿದ್ದರೆಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪ್ರಕರಣದ ತನಿಖೆ ನಡೆಯುತ್ತಿದೆ. ಯಾವುದೇ ಹೊಸ ಆರೋಪಗಳು ಬಂದರೂ ಆ ಬಗ್ಗೆ ತನಿಖೆ ನಡೆಯುತ್ತದೆ ಎಂದರು.

Share Post