ಪತ್ನಿಯನ್ನು ಹಾಡಹಗಲೇ ಕೊಚ್ಚಿಕೊಂದ ಪಾಪಿ ಪತಿ
ಹಾಸನ; ಸಂಸಾರದಲ್ಲಿ ಪತಿ-ಪತ್ನಿ ಕಲಹಗಳು ಸಾಮಾನ್ಯ. ಆದ್ರೆ ಅವು ವಿಕೋಪಕ್ಕೆ ತಿರುಗಿದಾಗ ಅನಾಹುತಗಳಾಗುತ್ತವೆ. ಅದೇ ರೀತಿಯ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಪತಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇಂದ್ರಮ್ಮ (48) ಕೊಲೆಯಾದ ಮಹಿಳೆ. ಆರೋಪಿ ಪತಿ ಚಂದ್ರಯ್ಯ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇಂದು ಬೆಳಗ್ಗೆ ಇಂದ್ರಮ್ಮ ನಾಲ್ವರು ಕಾರ್ಮಿಕರ ಜೊತೆ ಕೇಶವಮೂರ್ತಿ ಅವರ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಏಕಾಏಕಿ ದಾಳಿ ಮಾಡಿದ ಚಂದ್ರಯ್ಯ ತನ್ನ ಪತ್ನಿಯನ್ನು ಮನಸ್ಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾನೆ ಪರಾರಿಯಾಗಿದ್ದಾನೆ.
ಈ ವೇಳೆ ಇಂದ್ರಮ್ಮನ ಜೊತೆಗಿದ್ದ ಮಹಿಳೆಯೊಬ್ಬರು ಕಾಪಾಡಲು ಮುಂದಾದಾಗ ಆ ಮಹಿಳೆಯ ಮೇಲೂ ಚಂದ್ರಯ್ಯ ಹಲ್ಲೆ ಮಾಡಿದ್ದಾನೆ. ಚಂದ್ರಯ್ಯ-ಇಂದ್ರಮ್ಮನ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಆರು ತಿಂಗಳ ಹಿಂದೆಯೂ ಕೂಡಾ ಇಂದ್ರಮ್ಮನನ್ನು ನೇಣು ಹಾಕಿ ಕೊಲ್ಲಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.