Bengaluru

ರಾಜ್ಯದಲ್ಲಿ ಮಳೆಹಾನಿ ಬಗ್ಗೆ ಅಧ್ಯಯನ; ಬುಧವಾರ ಕೇಂದ್ರದ ತಂಡ ಭೇಟಿ

ಬೆಂಗಳೂರು; ರಾಜ್ಯದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಆಗಿರುವ ಹಾನಿಯ ಬಗ್ಗೆ ಅಧ್ಯಯನ ಮಾಡಲು ಕೇಂದ್ರದ ಹಿರಿಯ ಅಧಿಕಾರಿಗಳ ಮೂರು ತಂಡಗಳು ಬುಧವಾರ ಆಗಮಿಸಲಿವೆ. ಸೆ.7 ರಿಂದ ಸೆ. 9 ರವರೆಗೆ ರಾಜ್ಯದ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಮಳೆಹಾನಿ ಬಗ್ಗೆ ಅಧ್ಯಯನ ನಡೆಸಲಿವೆ.
ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆ ಮತ್ತು ಪ್ರವಾಹದಿಂದ ಬೆಳೆ ನಷ್ಟವಾಗಿತ್ತು. ಜೊತೆಗೆ ಹಲವಾರು ಜನರು ಮನೆ ಮಠ ಕಳೆದುಕೊಂಡಿದ್ದರು. ಹೀಗಾಗಿ ಆಗಿರುವ ಹಾನಿಯ ಬಗ್ಗೆ ಈ ತಂಡಗಳು ಅಧ್ಯಯನ ನಡೆಸಲಿವೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಆಶಿಶ್‌ ಕುಮಾರ್‌ ಅವರ ನೇತೃತ್ವದಲ್ಲಿ ಒಟ್ಟು ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಅಶೋಕ್ ಕುಮಾರ್‌ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಕೆ.ಮನೋಹರನ್ ಅವರು ಇನ್ನೆರಡು ತಂಡಗಳಲ್ಲಿ ಇರಲಿದ್ದಾರೆ.

ಆಶಿಶ್‌ ಕುಮಾರ್‌ ನೇತೃತ್ವದ ತಂಡ ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೂ, ಅಶೋಕ್‌ ಕುಮಾರ್‌ ತಂಡ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳು ಕೆ.ಮನೋಹರನ್ ಅವರ ತಂಡ ಬೀದರ್‌, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿವೆ ಎಂದರು ಹೇಳಿದರು.

Share Post