CrimeDistricts

ಆಡಿಯೋದಲ್ಲಿನ ಧ್ವನಿ ನನ್ನದೇ; ಶಾಸಕ ಬಸವರಾಜ ದಢೇಸಗೂರ

ಕೊಪ್ಪಳ; ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರವಾಗಿ ವೈರಲ್ ಆಗಿರುವ ಆಡಿಯೊದಲ್ಲಿರುವ ಧ್ವನಿ ನನ್ನದೇ ಎಂದು ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸಗೂರ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಧ್ವನಿ ನನ್ನದೇ. ಆದರೆ, ನಾನು ಯಾವುದೇ ಹಣ ಪಡೆದಿಲ್ಲ. ಬೇರೆ ಇಬ್ಬರ ‌ನಡುವೆ ಜಗಳ ಉಂಟಾಗಿತ್ತು. ಅದನ್ನು ಪರಿಹರಿಸುವಂತೆ ಅವರು ನನ್ನ ಬಳಿ ‌ಬಂದಿದ್ದರು. ಅವರಿಬ್ಬರನ್ನೂ ಸೇರಿಸಿ‌ ರಾಜಿ ಪಂಚಾಯಿತಿ ನಡೆಸಿದ್ದೆ. ಅದೇ ಸಂಭಾಷಣೆ ಈಗ ವೈರಲ್ ಆಗಿದೆ. ಪಿಎಸ್‌ಐ ನೇಮಕಾತಿ ಹಗರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಯಾವುದೋ ಆಡಿಯೊ, ವಿಡಿಯೊ ವೈರಲ್ ಮಾಡುತ್ತಿದ್ದಾರೆ ಎಂದು ಬಸವರಾಜ ದಡೇಸಗೂರ ಆರೋಪ ಮಾಡಿದ್ದಾರೆ. ಪಿಎಸ್ಐ‌ ನೇಮಕಾತಿ ಮಾಡಿಸುವುದಾಗಿ‌ ವ್ಯಕ್ತಿಯೊಬ್ಬರಿಂದ 15 ಲಕ್ಷ ರೂಪಾಯಿ ಪಡೆದ ಬಗ್ಗೆ ಶಾಸಕ ಬಸವರಾಜ ದಢೇಸಗೂರ ವಿರುದ್ಧ ಆರೋಪ ಕೇಳಿಬಂದಿದೆ. ಈ ಕುರಿತು ಆಡಿಯೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಾಸಕರು ಸ್ಪಷ್ಟನೆ ಕೊಟ್ಟಿದ್ದಾರೆ.

Share Post