DistrictsPolitics

ಇಂದು ಮಂಗಳೂರಿಗೆ ಆಗಮಿಸಲಿರುವ ಮೋದಿ; ಎಲ್ಲೆಡೆ ಬಿಗಿ ಬಂದೋಬಸ್ತ್‌

ಮಂಗಳೂರು; ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದು, ಎನ್​ಎಂಪಿಎ ಮತ್ತು ಎಮ್​ಆರ್​ಪಿಎಲ್​ಗೆ ಸೇರಿದ 3,800 ಕೋಟಿ ರೂ. ಮೊತ್ತದ ಎಂಟು ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ನೆರವೇರಿಸಲಿದ್ದಾರೆ.

      ಪ್ರಧಾನಿ ಲೋಕಾರ್ಪಣೆ ಮಾಡುವ ಯೋಜನೆಗಳಲ್ಲಿ ಕಂಟೇನರ್​ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ (ರೂ.281 ಕೋಟಿ), ಬಿಎಸ್ VI ಉನ್ನತೀಕರಣ ಯೋಜನೆ (ರೂ.1829 ಕೋಟಿ), ಸಮುದ್ರ ನೀರಿನ ನಿರ್ಲವಣೀಕರಣ ಘಟಕ (ರೂ.677 ಕೋಟಿ)ಗಳು ಸೇರಿವೆ.  ಇದೇ ಸಂದರ್ಭದಲ್ಲಿ ಮೋದಿ ಎನ್ಎಂಪಿಟಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ ರೂ.500 ಕೋಟಿ), ಶೇಖರಣಾ ಟ್ಯಾಂಕ್​ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (ರೂ.100 ಕೋಟಿ), ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ (ರೂ.100 ಕೋಟಿ) ಹಾಗೂ ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್​​ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (ರೂ.100ಕೋಟಿ) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಜೊತೆಗೆ, ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೋನೊವಾಲ್, ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್ ಹಾಗೂ ಶಂತನು ಠಾಕೂರ್ ಭಾಗವಹಿಸಲಿದ್ದಾರೆ.

Share Post