ಭಾರಿ ಮಳೆ ಹಿನ್ನೆಲೆ; ಬಿಳಗುಂಬ ಅಂಡರ್ಪಾಸ್ನಲ್ಲಿ ಸಿಲುಕಿದ ಖಾಸಗಿ ಬಸ್
ರಾಮನಗರ; ಇಲ್ಲಿನ ಬಿಳಗುಂಬ ಬಳಿಯ ಅಂಡರ್ ಪಾಸ್ ನಲ್ಲಿ ಖಾಸಗಿ ಬಸ್ ಒಂದು ಮಳೆ ನೀರಿನ ಪ್ರವಾಹದಲ್ಲಿ ಸಿಲುಕಿದೆ. ಇದರಿಂದಾಗಿ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ವಾಹನ ಸಂಚಾರವೂ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಸ್ಥಳೀಯರು ನೆರವಿಗೆ ಧಾವಿಸಿ ಬಸ್ನಲ್ಲಿದ್ದವರನ್ನು ರಕ್ಷಣೆ ಮಾಡಿದರು.
ಉದಯರಂಗ ಎಂಬ ಖಾಸಗಿ ಬಸ್ ಬೆಂಗಳೂರಿನಿಂದ ಮಳವಳ್ಳಿಗೆ ಹೊರಟಿತ್ತು. ಬಸ್ನಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಬಿಳಗುಂಬ ಅಂಡರ್ ಪಾಸ್ಗೆ ಬಂದಾಗ ಬಸ್ ನ ಅರ್ಧ ಮಟ್ಟಕ್ಕೆ ನೀರು ಆವರಿಸಿತ್ತು. ಬಸ್ ಮುಂದಕ್ಕೆ ಚಲಿಸಲು ಕೂಡಾ ಸಾಧ್ಯವಾಗಲಿಲ್ಲ. ಇದರಿಂದಾಗಿ ಪ್ರಯಾಣಿಕರು ಕೆಲಕಾಲ ಪರದಾಡಿದರು. ಕೆಳಗೆ ಇಳಿಯಲು ಕೂಡಾ ಕಷ್ಟವಾಗಿತ್ತು. ಈ ವೇಳೆ ಪ್ರಯಾಣಿಕರಿಗೆ ಸ್ಥಳೀಯರು ನೆರವಾದರು. ರಾಮನಗರ ಜಿಲ್ಲೆಯಾದ್ಯಂತ ಭಾನುವಾರ ಮಧ್ಯರಾತ್ರಿಯಿಂದ ಮಳೆ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರಾಮನಗರದ ರೈಲು ನಿಲ್ದಾಣ ಪೂರ್ತಿ ಜಲಾವೃತಗೊಂಡಿದೆ. ಈ ಮೈಸೂರು- ಬೆಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಸಂಗನ ಬಸವನದೊಡ್ಡಿ ಬಳಿ ಹೆದ್ದಾರಿಯ ಅಂಡರ್ ಪಾಸ್ ನಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಬಸ್ ಹಾಗೂ ಕಾರುಗಳು ಮುಳುಗಿವೆ. ಇದರಿಂದಾಗಿ ಕಿಲೋಮೀಟರ್ ಉದ್ದಕ್ಕೆ ವಾಹನಗಳು ಸಾಲು ಗಟ್ಟಿ ನಿಂತಿವೆ. ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಶಾಲೆ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಮನೆಗೆ ನೀರು ನುಗ್ಗಿದೆ. ಕೆರೆಗಳು ಕೋಡಿ ಬಿದ್ದಿದ್ದು, ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.