ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಸಂಬಂಧ ಗಲಾಟೆ; ಎಸ್ಡಿಪಿಐ ಕಚೇರಿಯಲ್ಲಿ ಪೊಲೀಸರ ಪರಿಶೀಲನೆ
ಶಿವಮೊಗ್ಗ; ಆಗಸ್ಟ್ ೧೫ರಂದು ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಶಿವಮೊಗ್ಗದಲ್ಲಿ ನಡೆದ ಗಲಾಟೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶಿವಮೊಗ್ಗ ಪೊಲೀಸರು ಶಿವಮೊಗ್ಗದ ಎಸ್ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗದ ಅಮೀರ್ ಅಹಮ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರ ಸಂಬಂಧ ಗಲಾಟೆ ನಡೆದಿತ್ತು. ಇದೇ ವೇಳೆ ಬಟ್ಟೆ ಅಂಗಡಿ ನೌಕರ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ್ದರು. ಈ ಪ್ರಕರಣ ಸಂಬಂಧ ಆರೋಪಿಗಳಾದ ತನ್ವೀರ್, ನದೀಮ್, ರೆಹಮಾನ್ ಹಾಗೂ ಜಬೀವುಲ್ಲಾ ಮನೆ ಮೇಲೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಎಸ್ಡಿಪಿಐ ಸಂಘಟನೆ ಜೊತೆ ಸಂಪರ್ಕ ಶಂಕೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಎಸ್ಡಿಪಿಐ ಕಚೇರಿಯಲ್ಲೂ ಶೋಧ ಕಾರ್ಯ ನಡೆಯುತ್ತಿದೆ.
ದಾಳಿಯಲ್ಲಿ ಮಹತ್ವದ ದಾಖಲೆ ಸಂಗ್ರಹಿಸಲಾಗಿದೆ ಎಂದು ತಿಳದುಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ಕುಂಸಿ ಪಿಐ ಹರೀಶ್ ಪಟೇಲ್, ವಿ ನೋಬ ನಗರ ಪೊಲೀಸ್ ಠಾಣೆ ಪಿಐ ರವಿಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಪಿಐ ಸಂತೋಷ್, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.