ಪ್ರಧಾನಿ ಮೋದಿ ಭೇಟಿಯಾಗಲಿರುವ ಮಾಜಿ ಸಿಎಂ ಯಡಿಯೂರಪ್ಪ
ಬೆಂಗಳೂರು; ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕವಾದ ಮೇಲೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹೆಚ್ಚು ಆಕ್ಟೀವ್ ಆಗಿದ್ದಾರೆ. ರಾಜಕೀಯ ಚಟುವಟಿಕೆಗಳಲ್ಲಿ ಉರುಪಿನಿಂದ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕ ಮೇಲೆ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಸಂಜೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.
ದೆಹಲಿಗೆ ಹೊರಡುವುದಕ್ಕೂ ಮೊದಲು ಕಾವೇರಿ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ನಾಳೆ ದೆಹಲಿಯಲ್ಲಿ ಇರುತ್ತೇನೆ. ಇವತ್ತು ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿದ್ದೇನೆ. ನಂತರ ಅಮಿತ್ ಶಾ ಹಾಗೂ ಜೆ.ಪಿ. ನಡ್ದಾ ಅವರನ್ನು ಭೇಟಿಯಾಗುತ್ತೇನೆ ಎಂದು ಅವರು ತಿಳಿಸಿದ್ದಾರೆ. ನಾಳೆ ಸಂಜೆ ವಾಪಸ್ ಬರಬೇಕು ಎಂದುಕೊಂಡಿದ್ದೇನೆ. ರಾಜನಾಥ್ ಸಿಂಗ್ ಸೇರಿದಂತೆ ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ. ಮುಂದೆ ಏನು ಕೆಲಸ ಮಾಡಬೇಕು ಎಂದು ಅವರ ಸಲಹೆ ಕೇಳುವುದು ನನ್ನ ಕರ್ತವ್ಯ ಎಂದು ತಿಳಿಸಿದರು.
ಈ ಭೇಟಿಯ ವೇಳೆ ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಭೇಟಿಯಾಗಲು ಪ್ರಯತ್ನಪಡುತ್ತೇನೆ ಎಂದು ಹೇಳಿದರು.