ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; 13 ಮಂದಿ ದುರ್ಮರಣ ಶಂಕೆ
ಶಿಮ್ಲಾ; ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು, ಇದರಿಂದಾಗಿ ಭುಕುಸಿತ ಉಂಟಾಗಿದೆ. ಭೂಕುಸಿತ ಹಾಗೂ ಹಠಾತ್ ಪ್ರವಾಹದ ಪರಿಸ್ಥಿತಿಯಿಂದ 13 ಮಂದಿ ಸಾವಿಗೀಡಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಚೋವರಿ ತಹಸಿಲ್ನ ಬನೆತ್ ಗ್ರಾಮದಲ್ಲಿ ನಿನ್ನೆ ಮುಂಜಾನೆ ಭೂಕುಸಿತವಾಗಿದೆ. ಈ ವೇಳೆ ಮನೆಯೊಂದು ಉರುಳಿ ಬಿದ್ದಿದ್ದು, ಅದರ ಅವಶೇಷಗಳಡಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಮಂಡಿ-ಕಟೌಲಾ-ಪರಾಶಾರ್ ಮಾರ್ಗದ ಬಾಗಿ ನುಲ್ಲಾ ಎಂಬಲ್ಲಿನ ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಐದು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಿ ಹಾಗೂ ಹಳೆ ಕಟೌಲಾ ಪ್ರದೇಶಗಳ ಹಲವಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗೋಹರ್ ಡೆವಲಪ್ಮೆಂಟ್ ಬ್ಲಾಕ್ನ ಕಶಾನ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನ ಅವಶೇಷಗಳಡಿಯಲ್ಲಿ ಮತ್ತೊಂದು ಕುಟುಂಬದ ಎಂಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ. ಮಂಡಿ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ದಿಢೀರ್ ಪ್ರವಾಹದಿಂದಾಗಿ ವಿವಿಧ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿದುಕೊಂಡಿದೆ. ವಾಹನಗಳು ಹಾನಿಗೀಡಾಗಿವೆ. ಅತ್ತ ಕಾಂಗ್ರಾ ಜಿಲ್ಲೆಯಲ್ಲಿ ಚಕ್ಕಿ ನದಿ ಮೇಲಿನ ರೈಲ್ವೆ ಸೇತುವೆ ಕುಸಿದಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.