ಕಾಶ್ಮೀರಿ ಪಂಡಿತರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ; ಓರ್ವ ಸಾವು
ಶ್ರೀನಗರ; ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಭಯೋತ್ಪಾದಕರು ಕಾಶ್ಮೀರ ಪಂಡಿತ ಸಹೋದರರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಮತ್ತೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ.
ಶೋಪಿಯಾನ್ನ ಚೋಟಿಪೋರಾ ಪ್ರದೇಶದಲ್ಲಿದ್ದ ಆಪಲ್ ಆರ್ಕಿಡ್ನಲ್ಲಿ ಭಯೋತ್ಪಾದಕರು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 45 ವರ್ಷದ ಕಾಶ್ಮೀರ ಪಂಡಿತ ಸುನೀಲ್ ಭಟ್ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಮತ್ತು ಇತರ ನಾಗರಿಕರನ್ನು ಗುರಿಯಾಗಿಸಿಕೊಂಡ ಉದ್ದೇಶಿತ ಹತ್ಯೆಗಳ ನಡೆಯುತ್ತಿವೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಹೊಸ ದಾಳಿ ನಡೆದಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮೇ 31 ರಂದು ಜಮ್ಮುವಿನ ಸಾಂಬಾ ಜಿಲ್ಲೆಗೆ ಸೇರಿದ ಶಾಲಾ ಶಿಕ್ಷಕಿ ರಜನಿ ಬಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಕಾಶ್ಮೀರಿ ಪಂಡಿತರಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು.