ಎಸಿಬಿ ರಚನೆ ಆದೇಶ ರದ್ದುಪಡಿಸಿದ ಹೈಕೋರ್ಟ್; ಲೋಕಾಯುಕ್ತಕ್ಕೆ ಮತ್ತೆ ಶಕ್ತಿ
ಬೆಂಗಳೂರು; ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಮೂಲಕ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬಿದೆ. ೨೦೧೬ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ರದ್ದುಪಡಿಸಿ, ಎಸಿಬಿ ರಚನೆ ಮಾಡಿತ್ತು. ಆದ್ರೆ ಇದನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿತ್ತು. ಹೈಕೋರ್ಟ್ ವಿಭಾಗೀಯ ಪೀಠ ಇಂದು ಈ ಕೇಸ್‌ನ ಮಹತ್ವದ ತೀರ್ಪು ಪ್ರಕಟ ಮಾಡಿದೆ.
ನ್ಯಾ. ವೀರಪ್ಪ ಹಾಗೂ ನ್ಯಾ.ಹೇಮಲೇಖ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಎಸಿಬಿ ಪೊಲೀಸ್ ಠಾಣೆ ಸ್ಥಾನಮಾನ ರದ್ದುಪಡಿಸಿ, ಅದನ್ನು ಲೋಕಾಯುಕ್ತದಡಿಗೆ ತರುವಂತೆ ಹೈಕೋರ್ಟ್ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬಿದಂತಾಗಿದೆ. ಎಸಿಬಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳೂ ಈಗ ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ.