ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ
ಬೆಂಗಳೂರು; ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದಲೇ ಧ್ವಜಾರೋಹಣ ನಡೆಸಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆ ಮೈದಾನದ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎಂದು ತೀರ್ಪು ಬಂದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದಲೇ ಅಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು.
ಇತ್ತೀಚೆಗೆ ಚಾಮರಾಜಪೇಟೆ ಮೈದಾನದ ವಿಚಾರದಲ್ಲಿ ವಿವಾದ ಏರ್ಪಟ್ಟಿತ್ತು. ಈ ನಡುವೆ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಈ ಮೈದಾನದಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸ ಆಚರಿಸುತ್ತೇವೆ ಎಂದು ಹೇಳಿದ್ದರು. ಆದ್ರೆ, ಸಚಿವ ಆರ್.ಅಶೋಕ್ ಇದಕ್ಕೆ ಅವಕಾಶ ಕೊಡದೆ, ಸರ್ಕಾರದಿಂದಲೇ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಧ್ವಜಾರೋಹನ ಮಾಡಲಿದ್ದಾರೆ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರು, ಸಂಸದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಸಚಿವರು ಹೇಳಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಸರ್ಕಾರದ ವತಿಯಿಂದಲೇ ಚಾಮರಾಜ ಪೇಟೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.