Districts

ಮಡಿಕೇರಿ ತಾಲ್ಲೂಕಿನಲ್ಲಿ ಗುಡ್ಡ ಕುಸಿಯುವ ಭೀತಿ; ಜನರಲ್ಲಿ ಆತಂಕ

ಮಡಿಕೇರಿ; ಭಾರಿ ಮಳೆಯಿಂದಾಗಿ ಮಡಿಕೇರಿ ತಾಲ್ಲೂಕಿನ ಭಾಗಮಂಡಲದ‌ ಕೆಲವೆಡೆ ಮಣ್ಣು ಕುಸಿದಿದೆ. ಬೆಟ್ಟ, ಗುಡ್ಡಗಳಿಂದ ನಿರಂತರವಾಗಿ ಕೆಸರು ಕೆಳಗಿಳಿಯುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಭಾಗಮಂಡಲ, ಕರಿಕೆ, ತಣ್ಣಿಮಾಣಿ ರಸ್ತೆಗಳಲ್ಲಿ ಬಿದ್ದ ಮಣ್ಣು, ಕಲ್ಲು ಹಾಗೂ ಮರದ ದಿಮ್ಮಿಗಳ ತೆರವು ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಆದರೆ ಬೆಟ್ಟದಿಂದ ಧಾರಾಕಾರವಾಗಿ ಕೆಳಗಿಳಿಯುತ್ತಿರುವ ಕೆಸರು ಮಿಶ್ರಿತ ನೀರು ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆ ಮುಂದುವರಿದಿದೆ. ಹವಾಮಾನ ಇಲಾಖೆ ಇಂದೂ ರೆಡ್ ಅಲರ್ಟ್ ಘೋಷಿಸಿದೆ‌. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿ 19 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ. ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಗೆ ಕೆಲವು ಮನೆಗಳ ಸಮೀಪ ಮಣ್ಣು ಕುಸಿದಿದ್ದು ಅವರೆಲ್ಲರೂ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಮಳೆ ಇನ್ನೂ ಮುಂದುವರಿದಿದೆ. 2018ರಲ್ಲಿ ಈ ಪ್ರಮಾಣದ ಮಳೆ ಬಂದಿತ್ತು’ ಎಂದು ಸ್ಥಳೀಯರು ತಿಳಿಸಿದ್ದಾರೆ‌. ಭಾಗಮಂಡಲದಲ್ಲಿ ‌ 9, ಎಮ್ಮೆಮಾಡುವಿನಲ್ಲಿ 8, ಸೋಮವಾರಪೇಟೆಯ ಶಿರಂಗಾಲದಲ್ಲಿ 6 ಸೆಂ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

Share Post