ಇಷ್ಟಲಿಂಗ ದೀಕ್ಷೆ ಪಡೆದ ರಾಹುಲ್ ಗಾಂಧಿ; ಮುರುಘಾ ಶರಣರಿಂದ ಲಿಂಗಧಾರಣೆ
ಚಿತ್ರದುರ್ಗ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಷ್ಟಲಿಂಗ ದೀಕ್ಷೆ ಪಡೆದಿದ್ದಾರೆ. ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಚಿತ್ರದುರ್ಗದ ಮರುಘಾಮಠಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಅವರು ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದರು. ಕೊರಳಿಗೆ ಲಿಂಗಧಾರಣೆ ಮಾಡಿಕೊಂಡ ರಾಹುಲ್ ಗಾಂಧಿ, ವಿಭೂತಿ ಹಚ್ಚಿಕೊಂಡು ಬಸವತತ್ವ ಪರಿಪಾಲನೆ ಮಾಡುವ ವಾಗ್ದಾನ ಮಾಡಿದರು.
ರಾಹುಲ್ ಗಾಂಧಿಯವರು ಶ್ರೀಗಳ ಜೊತೆ ಚರ್ಚೆ ಮಾಡಿದರು. ಈ ವೇಳೆ ಲಿಂಗಪೂಜೆಯ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಮಠದ ಪ್ರತಿನಿಧಿಯೊಬ್ಬರನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡರು ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮುರುಘಾ ಶರಣರು, ರಾಹುಲ್ ಗಾಂಧಿ ಅವರು ಮಠ ಹಾಗೂ ಗುರು ಪರಂಪರೆಯ ಬಗ್ಗೆ ಪ್ರಶ್ನಿಸಿದರು. ಬಸವತತ್ವ ಹಾಗೂ ಕಾಯಕ ಪ್ರಜ್ಞೆ ಬಗ್ಗೆ ವಿವರಿಸಿದೆವು. ಲಿಂಗದೀಕ್ಷೆಯ ಕುರಿತು ಮಾಹಿತಿ ನೀಡಿ, ಅಂಗೈನಲ್ಲಿ ಇಷ್ಟಲಿಂಗ ಇಟ್ಟುಕೊಂಡು ಪ್ರಾತ್ಯಕ್ಷಿಕೆ ತೋರಿಸಿದೆವು. ಇದರಿಂದ ಪ್ರೇರಣೆಗೊಂಡ ಅವರು ಲಿಂಗದೀಕ್ಷೆ ಪಡೆಯುವ ಇಚ್ಛೆ ವ್ಯಕ್ತಪಡಿಸಿದರು ಎಂದರು.