ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ
ಕೊಲಂಬೋ; ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ರಾನಿಲ್ 134 ಮತಗಳನ್ನು ಪಡೆದರು. ಅವರ ಎದುರಾಳಿ ಡಲ್ಲಾಸ್ ಅಲಪೆರುಮ 82 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ.
ಒಟ್ಟು 223 ಸಂಸದರು ಮತದಾನದಲ್ಲಿ ಪಾಲ್ಗೊಂಡಿದ್ದರು. ಇಬ್ಬರು ಸಂಸದರು ಮತದಾನಕ್ಕೆ ಗೈರು ಹಾಜರಾಗಿದ್ದರು. ಚಲಾವಣೆಯಾದ 223 ಮತಗಳ ಪೈಕಿ 219 ಮತಗಳನ್ನು ಮಾನ್ಯವೆಂದು ಪರಿಗಣಿಸಲಾಗಿದೆ. ನಾಲ್ಕು ಮತಗಳು ಅಸಿಂಧು ಎಂದು ಘೋಷಿಸಲಾಯಿತು.
ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ, ರನಿಲ್ ವಿಕ್ರಮಸಿಂಘೆ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾ, ಶ್ರೀಲಂಕಾವನ್ನು ತೊಂದರೆಯಿಂದ ಹೊರಬರಲು ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವಂತೆ ಕೇಳಿಕೊಂಡರು. ಅಲ್ಲದೆ, ಗುರುವಾರ ತಾವೇ ಸರ್ವಪಕ್ಷಗಳನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು. ಗೊಟಬಯ ರಾಜಪಕ್ಸೆ ಅವರು ಶ್ರೀಲಂಕಾದಿಂದ ಪಲಾಯನ ಮಾಡುವ ಮೊದಲು ಮತ್ತು ರಾಜೀನಾಮೆ ನೀಡುವ ಮೊದಲು ರಾನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು.
ರಾನಿಲ್ ಅಧ್ಯಕ್ಷರಾಗಿ ಗೊಟಬಯ ಅವರ ಉಳಿದ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಅವರ ಅಧಿಕಾರಾವಧಿಯು ನವೆಂಬರ್ 2024 ರ ಅಂತ್ಯಕ್ಕೆ ಕೊನೆಗೊಳ್ಳಲಿದೆ.