ರಾಷ್ಟ್ರಪತಿ ಚುನಾವಣೆ; ಎಲ್ಲಾ ರಾಜ್ಯಗಳಲ್ಲಿ ಮತದಾನ ಶುರು
ನವದೆಹಲಿ; ಇಂದು ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ದೇಶದಲ್ಲಿರುವ ಎಲ್ಲಾ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರಿಗೆ ಮತದಾನ ಮಾಡುವ ಅವಕಾಶವಿದೆ. ದೇಶದಲ್ಲಿ 4800 ಶಾಸಕರು, ಸಂಸದರಿದ್ದಾರೆ. ಸಂಜೆ ಐದು ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ.
ಜಾರ್ಖಂಡ್ನ ಮಾಜಿ ಗವರ್ನರ್ ಮುರ್ಮು ಅವರಿಗೆ ಹಲವಾರು ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡುವುದಾಗಿ ಈಗಾಗಲೇ ಭರವಸೆ ನೀಡಿವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ-ಸೆಕ್ಯುಲರ್ (ಜೆಡಿ-ಎಸ್), ಶಿರೋಮಣಿ ಅಕಾಲಿದಳ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಎಐಎಡಿಎಂಕೆ, ಟಿಡಿಪಿ, ವೈಎಸ್ಆರ್ಸಿಪಿ ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಬೆಂಬಲ ನೀಡುವುದಾಗಿ ಘೋಷಿಸಿವೆ.
ಯಶವಂತ ಸಿನ್ಹಾ ಅವರಿಗೆ ಕಾಂಗ್ರೆಸ್, ಎನ್ಸಿಪಿ, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ಅಖಿಲೇಶ್ ಯಾದವ್ ನೇತೃತ್ವದ-ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಬೆಂಬಲಿಸುತ್ತಿವೆ. ಎಐಎಂಐಎಂ, ರಾಷ್ಟ್ರೀಯ ಜನತಾ ದಳ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ , ಆಮ್ ಆದ್ಮಿ ಪಕ್ಷ (ಎಎಪಿ) ಕೂಡಾ ಯಶವಂತ ಸಿನ್ಹಾಗೆ ಬೆಂಬಲವಾಗಿ ನಿಂತಿವೆ. ಸಂಖ್ಯಾಬಲದ ಆಧಾರದ ಮೇಲೆ ಹೇಳುವುದಾದರೆ ದ್ರೌಪದಿ ಮುರ್ಮು ಗೆಲ್ಲುವುದು ಪಕ್ಕಾ ಎಂದು ಹೇಳಲಾಗುತ್ತಿದೆ.