ದೇವೇಗೌಡರು ನಾಲ್ವರ ಮೇಲೆ ಹೋಗುತ್ತಾರೆ; ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ
ತುಮಕೂರು; ರಾಜಕಾರಣಿಗಳು ಮಾತಿನ ಭರದಲ್ಲಿ ಮಾನವೀಯತೆಯನ್ನೇ ಮರೆತುಬಿಡುತ್ತಾರೆ. ಬಾಯಿಗೆ ಬಂದಿದ್ದನ್ನೆಲ್ಲಾ ಮಾತನಾಡುತ್ತಾರೆ. ಒಬ್ಬರ ಸಾವನ್ನು ಬಯಸುವುದಕ್ಕೂ ಅವರು ಹೇಸುವುದಿಲ್ಲ. ಅದಕ್ಕೆ ಉದಾಹರಣೆ ಮಾಜಿ ಶಾಸಕ ಕೆ.ಎನ್.ರಾಜಣ್ಣ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ತುಮಕೂರಿನ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಧುಗಿರಿ ತಾಲ್ಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕೆ.ಎನ್.ರಾಜಣ್ಣ ನಾಲಗೆ ಹರಿಬಿಟ್ಟಿದ್ದರು. ರಾಜಣ್ಣ ಹೇಳಿಕೆಯ ವಿಡಿಯೊವನ್ನು ನೆಟ್ಟಿಗರು ಹಂಚಿಕೊಂಡಿದ್ದು, ಕಿಡಿಕಾರಿದ್ದಾರೆ. ಇಂತಹ ಹೇಳಿಕೆ ನೀಡುವುದು ಸರಿಯೆ ಎಂದು ಪ್ರಶ್ನಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.