ನೀತಿ ಸಂಹಿತೆ ಉಲ್ಲಂಘನೆ ಕೇಸ್; ಕೋರ್ಟ್ಗೆ ಹಾಜರಾದ ನಟ ಮೋಹನ್ ಬಾಬು
ತಿರುಪತಿ; ಚುನಾವಣೆ ಸಂದರ್ಭದಲ್ಲಿ ಧರಣಿ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಆರೋಪ ಎದುರಿಸುತ್ತಿರುವ ತೆಲುಗಿನ ಖ್ಯಾತ ಮೋಹನ್ ಬಾಬು ಹಾಗೂ ಅವರ ಇಬ್ಬರು ಪುತ್ರರು ಇಂದು ಕೋರ್ಟ್ಗೆ ಹಾಜರಾಗಿದ್ದರು. ಆಂಧ್ರಪ್ರದೇಶದ ತಿರುಪತಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಅವರು ವಿಚಾರಣೆ ಎದುರಿಸಿದರು. ಕೋರ್ಟ್ ವಿಚಾರಣೆಯನ್ನು ಸೆಷ್ಟೆಂಬರ್ 30ಕ್ಕೆ ಮುಂದೂಡಿದೆ.
ಮೋಹನ್ ಬಾಬು ಅವರು ಶ್ರೀ ವಿದ್ಯಾನಿಕೇತನ್ ಎಂಬ ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಇದರ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಮೋಹನ್ ಬಾಬು ತಿರುಪತಿ ಹಾಗೂ ಮದನಪಲ್ಲಿ ಹೆದ್ದಾರಿ ಧರಣಿ ಕುಳಿತಿದ್ದರು. 2019 ಮಾರ್ಚ್ 22 ರಂದು ಅವರು ಧರಣಿ ಮಾಡಿದ್ದರು. ಆದರೆ, ಅಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದ ಕಾರಣ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಹಾಗೂ ಧರಣಿಗೆ ಅನುಮತಿ ಪಡೆದಿಲ್ಲ ಎಂಬ ಆರೋಪದ ಮೇಲೆ ಚಂದ್ರಗಿರಿ ಪೊಲೀಸರು ಮೋಹನ್ ಬಾಬು, ಪುತ್ರರಾದ ವಿಷ್ಣು, ಮನೋಜ್ ಹಾಗೂ ಶ್ರೀವಿದ್ಯಾನಿಕೇತನ ವಿದ್ಯಾಸಂಸ್ಥೆಯ ತುಳಸಿ ನಾಯ್ಡು, ಪಿಆರ್ಒ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದೇ ಪ್ರಕರಣದಲ್ಲಿ ಮೋಹನ್ ಬಾಬು, ತಮ್ಮ ಪುತ್ರರಾದ ವಿಷ್ಣು, ಮನೋಜ್ ಅವರೊಂದಿಗೆ ನ್ಯಾಯಾಲಯಕ್ಕೆ ಹಾಜರಾದರು. ಈ ವೇಳೆ ಮಾತನಾಡಿದ ಮೋಹನ್ ಬಾಬು ಅವರು, ನನಗೆ ಯಾವುದೇ ಸಮನ್ಸ್ ನೀಡಿರಲಿಲ್ಲ. ಆದರೆ, ನ್ಯಾಯಾಧೀಶರು ಬರಬೇಕೆಂದು ತಿಳಿಸಿದ್ದರಿಂದ ಕೋರ್ಟ್ಗೆ ಹಾಜರಾಗಿದ್ದೇನೆ. ಅವರ ಸಮ್ಮಖದಲ್ಲೇ ಸಹಿ ಮಾಡಿಸಿಕೊಂಡು ವಿಚಾರಣೆ ಮುಂದೂಡಿದರು. ಇದಕ್ಕಿಂತ ಹೆಚ್ಚಾಗಿ ಏನೂ ಹೇಳುವುದಿಲ್ಲ ಎಂದು ತೆರಳಿದರು.