NationalPolitics

ಯಾರು ಈ ಏಕನಾಥ್‌ ಶಿಂಧೆ; ಒಂದು ಕಾಲದಲ್ಲಿ ಆಟೋ ಓಡಿಸ್ತಿದ್ದವರು ಮಹಾ ನಾಯಕರಾಗಿದ್ದು ಹೇಗೆ..?

ಮುಂಬೈ; ಏಕನಾಥ್‌ ಶಿಂಧೆ.. ಈಗ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನಾಯಕ… ಠಾಕ್ರೆ ಕುಟಂಬಕ್ಕೇ ಠಕ್ಕರ್‌ ಕೊಟ್ಟು, ಇಡೀ ಶಿವಸೇನೆಯನ್ನು ರಾತ್ರೋರಾತ್ರಿ ತನ್ನತ್ತ ತಿರುಗಿಸಿಕೊಂಡು ರಾಜಕಾರಣಿ.. ಹಾಗಾದ್ರೆ ಈ ಏಕನಾಥ್‌ ಶಿಂಧೆ ಯಾರು..? ಇವರ ಹಿನ್ನೆಲೆ ಏನು..? ಇವರು ರಾಜಕೀಯಕ್ಕೆ ಬಂದಿದ್ದು ಹೇಗೆ..? ಇಷ್ಟೊಂದು ವರ್ಚಸ್ಸು ಬಂದಿದ್ದು ಹೇಗೆ..? 

 ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ನಂತರ ಶಿವಸೇನೆ ಮತ್ತು ಮಹಾ ವಿಕಾಸ್ ಅಘಾಡಿ ನಡುವೆ ತಿಕ್ಕಾಟ ನಡೆದಿದೆ. ವಿವಾದಕ್ಕೆ ನಿಜವಾದ ಕಾರಣಗಳನ್ನು ಕಂಡುಹಿಡಿಯುವ ಮೊದಲೇ ಶಿವಸೇನೆಯ ಶಾಸಕರು ಬಂಡಾಯವೆದ್ದರು. ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ಅವರು ಶಿವಸೇನೆಯ ಬಹುತೇಕ ಶಾಸಕರೊಂದಿಗೆ ಹೋಟೆಲ್‌ ಸೇರಿದ್ದಾರೆ. ಇದರೊಂದಿಗೆ, ಮಹಾರಾಷ್ಟ್ರ ರಾಜಕೀಯದಲ್ಲಿ ತೆರೆಮರೆಯಲ್ಲಿದ್ದ ಏಕನಾಥ್‌ ಶಿಂಧೆ ಒಮ್ಮಿಂದೊಮ್ಮೆಲೆ  ಇಡೀ ದೇಶವೇ ಮಾತನಾಡುವಂತವರಾಗಿದ್ದಾರೆ.

         ಶಿವಸೇನೆಯ 37ಕ್ಕೂ ಹೆಚ್ಚು ಶಾಸಕರು ಏಕನಾಥ್ ಅವರೊಂದಿಗೆ ಇದ್ದಾರೆ. ಇದರ ಜೊತೆಗೆ ಹನ್ನೊಂದು ಮಂದಿ ಪಕ್ಷೇತರರೂ ಅವರ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಉದ್ಧವ್‌ ಸರ್ಕಾರ ಮಕಾಡೆ ಮಲಗಿದೆ. ಏಕನಾಥ್‌ ಸಿಎಂ ಆಗೋದು ಹೆಚ್ಚುಕಡಿಮೆ ಪಕ್ಕಾ. ಅಂದಹಾಗೆ, ಏಕನಾಥ್ ಅವರು ಥಾಣೆಯ ಕೊಪ್ರಿ-ಪಚ್ಪಖಾಡಿ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಹಲವಾರು ದಶಕಗಳಿಂದ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರು ಕಲ್ಯಾಣ್ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸದರಾಗಿದ್ದಾರೆ.

ಏಕನಾಥ್  ಥಾಣೆ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು. ನಂತರ, ಅವರು 2004 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಏಕನಾಥ್‌ ರಾಜಕೀಯಕ್ಕೆ ಬರುವ ಮೊದಲು ಆರಂಭಿಕ ದಿನಗಳಲ್ಲಿ, ಆಟೋರಿಕ್ಷಾ ಓಡಿಸುತ್ತಿದ್ದರು.

ಏಕನಾಥ್ ಅವರ ರಾಜಕೀಯ ಪಯಣವನ್ನು ವಿಶ್ಲೇಷಿಸಿರುವ ಪತ್ರಿಕೆಯೊಂದರ ಸಂಪಾದಕರೊಬ್ಬರು, “ಅವರು ಆಕ್ರಮಣಕಾರಿ ಶಿವಸೈನಿಕನಿಂದ ಜವಾಬ್ದಾರಿಯುತ ಮಂತ್ರಿಯವರೆಗೆ ಬೆಳೆದಿದ್ದಾರೆ” ಎಂದು ಹೇಳಿದ್ದಾರೆ. “ಏಕನಾಥ್ ಅವರ ಹುಟ್ಟೂರು ಸತಾರಾ. ಅವರು ಅಧ್ಯಯನಕ್ಕಾಗಿ ಥಾಣೆಗೆ ಹೋಗಿದ್ದರು. ಅಲ್ಲಿ ಅವರು ಆನಂದ್ ದಿಘೆ ಅವರೊಂದಿಗೆ ಸಂಪರ್ಕಕ್ಕೆ ಬಂದರು. ಅಲ್ಲಿಂದ ಅವರ ರಾಜಕೀಯ ಜೀವನ ಪ್ರಾರಂಭವಾಯಿತು.

ರಾಜಕೀಯ ವೃತ್ತಿಜೀವನ

 ೧.  ೧೮ ನೇ ವಯಸ್ಸಿನಲ್ಲಿ ಶಿವಸೇನೆ ಸೇರಿದರು

೨. 1997 ರಲ್ಲಿ  ಥಾಣೆ ಮುನ್ಸಿಪಲ್ ಚುನಾವಣೆಯಲ್ಲಿ ಏಕನಾಥ್  ಅವರಿಗೆ ಕೌನ್ಸಿಲರ್ ಟಿಕೆಟ್ ನೀಡಲಾಯಿತು

೩.  ಮುನ್ಸಿಪಲ್ ಚುನಾವಣೆಗಳಲ್ಲಿ ಜಯಗಳಿಸಿದ್ದಲ್ಲದೆ ಕಾರ್ಪೊರೇಷನ್ ನ ಹೌಸ್ ಲೀಡರ್ ಆದರು

೪. ನಂತರ 2004 ರಲ್ಲಿ, ಅವರು ಥಾಣೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು

೫. 2009 ರಿಂದ, ಅವರು ಪ್ರತಿಬಾರಿಯೂ ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ

೬. 2015 ರಿಂದ 2019 ರವರೆಗೆ, ಅವರು ಲೋಕೋಪಯೋಗಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು

೭. ಪ್ರಸ್ತುತ, ಅವರು ರಾಜ್ಯ ನಗರಾಭಿವೃದ್ಧಿ ಸಚಿವರು ಮಾತ್ರವಲ್ಲ, ಥಾಣೆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ

Share Post