ಮೋದಿ ಆಗಮನಕ್ಕೆ ಕ್ಷಣಗಣನೆ; ಭದ್ರತೆ ಹೇಗಿದೆ ಗೊತ್ತಾ..?
ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11.45ಕ್ಕೆ ವಿಶೇಷ ವಿಮಾನದ ಮೂಲಕ ಅವರು ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ. ನಂತರ ಅವರು ಸಂಜೆ 4ಗಂಟೆಯವರೆಗೆ ಬೆಂಗಳೂರಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಸ್ವಾಗತಕ್ಕೆ ರಾಜಧಾನಿ ಬೆಂಗಳೂರು ಸಿದ್ಧಗೊಂಡಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ.
ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿಯವರು ಭದ್ರತೆಯ ನೇತೃತ್ವ ವಹಿಸಿದ್ದಾರೆ. ಇವರ ಜೊತೆಗೆ ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು ಕೂಡಾ ಭದ್ರತಾ ಕಾರ್ಯಗಳನ್ನು ಆಗಿಂದಾಗ್ಗೆ ಪರಿಶೀಲಿಸಲಿದ್ದಾರೆ. 30 ಎಸಿಪಿಗಳು, 80ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, ಸಿಐಡಿ, ಎಸಿಬಿ ಸಿಬ್ಬಂದಿಯೂ ಕೂಡಾ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳು, ಗರುಡ ಪಡೆ ಬಂದೋಬಸ್ತ್ ಬಂದೋಬಸ್ತ್ ನೀಡುತ್ತಿದೆ. ಐಎಸ್‌ಡಿ ಪೊಲೀಸರು ಕೂಡಾ ಎಲ್ಲೆಡೆ ನಿಗಾ ವಹಿಸಿದ್ದಾರೆ. ಹೀಗೆ ಒಟ್ಟು ಹತ್ತು ಸಾವಿರ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆ ಮಾಡಲಿದ್ದಾರೆ. ಅನಂತರ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಲಿದ್ದು, ಮಧ್ಯಾಹ್ನ 1.45 ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ, ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಿದ 150 ಐಟಿಐ ಕಾಲೇಜುಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 2.45 ಗಂಟೆಗೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಕಾರ್ಯಕ್ರಮ ಮುಗಿದ ನಂತರ ನೇರವಾಗಿ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಸಂಜೆ 5.30 ಕ್ಕೆ ಮೈಸೂರಿನ ಮಹಾರಾಜ ಮೈದಾನಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಾಳೆ ರಾತ್ರಿ 7 ಗಂಟೆಗೆ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ರಾತ್ರಿ 7.50 ಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಜೂನ್ 21 ರಂದು ಮಂಗಳವಾರ ಬೆಳಗ್ಗೆ 6.30 ಕ್ಕೆ ಪ್ರಧಾನಿ ಮೋದಿಯವರು ಮೈಸೂರು ಅರಮನೆಯ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗಪಟುಗಳೊಂದಿಗೆ ಬೆರೆತು ಯೋಗ ಮಾಡಲಿದ್ದಾರೆ. ಬೆಳಗ್ಗೆ 8.10 ಕ್ಕೆ ವಸ್ತುಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.20ಕ್ಕೆ ಮೈಸೂರು ಅರಮನೆ ಆವರಣದಿಂದ ನಿರ್ಗಮಿಸಿ, ಬೆಳಗ್ಗೆ 9.45ಕ್ಕೆ ಮೈಸೂರಿನ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಲಿದ್ದಾರೆ.