CrimeDistricts

ಪತಿಯನ್ನೇ ಕೊಲೆಗೈದಳು; ಅಪಘಾತವಾಗಿದೆ ಎಂದು ನಾಟಕ ಮಾಡಿದಳು..!

ಹಾಸನ; ಗಂಡನನ್ನೇ ಕೊಲೆ ಮಾಡಿ, ನಂತರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಹೊರಟು ಮಹಿಳೆಯೊಬ್ಬಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯ ನಾಟಕವನ್ನು ಪೊಲೀಸರು ಬಯಲು ಮಾಡಿದ್ದು, ಕಂಬಿ ಎಣಿಸುವಂತೆ ಮಾಡಿದ್ದಾರೆ.

 

ಈ ಘಟನೆ ನಡೆದಿರೋದು ಹಾಸನದ ಮೊಸಳೆಹೊಸಳ್ಳಿ ಬಳಿ.. ಜೂನ್ 5ರ ರಾತ್ರಿ ಬೈಕ್‍ನಿಂದ ಬಿದ್ದ ಸ್ಥಿತಿಯಲ್ಲಿ ಕೃಷ್ಣೇಗೌಡ(52) ಎಂಬುವವರು ಸಾವನ್ನಪ್ಪಿದ್ದರು. ಬಸ್ತಿಹಳ್ಳಿ ಗ್ರಾಮದವರಾದ ಕೃಷ್ಣೇಗೌಡರು, ತಮ್ಮ ಪತ್ನಿ ಜ್ಯೋತಿ ತವರು ಮೊಸಳೆಹೊಸಳ್ಳಿ ಸಮೀಪದ ಗುಡುಗನಹಳ್ಳಿಯಲ್ಲಿ ವಾಸವಿದ್ದರು. ಆದ್ರೆ, ಜೂನ್‌ ಐದರಂದು ರಾತ್ರಿ ಗುಡುಗನಹಳ್ಳಿ ಮನೆಯ ಸಮೀಪದ ರಸ್ತೆಯಲ್ಲಿ ಕೃಷ್ಣೇಗೌಡ ಸಾವನ್ನಪ್ಪಿದ್ದರು. ಪಕ್ಕದಲ್ಲಿ ಬೈಕ್‌ ಕೂಡಾ ಬಿದ್ದಿತ್ತು. ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಜ್ಯೋತಿ ಹೇಳಿಕೆ ನೀಡಿದ್ದರು.

 

ಆದ್ರೆ ಪೊಲೀಸರಿಗೆ ಈ ಬಗ್ಗೆ ಅನುಮಾನವಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ, ಅದು ಅಪಘಾತವಲ್ಲ, ಕೊಲೆ ಎಂಬುದು ಸಾಬೀತಾಗಿತ್ತು. ಇದೀಗ ಕೃಷ್ಣೇಗೌಡರ ಪತ್ನಿ ಜ್ಯೋತಿ ಕಂಬಿ ಎಣಿಸುತ್ತಿದ್ದಾಳೆ.  ಕೃಷ್ಣೇಗೌಡ ಅವರು ಜ್ಯೋತಿಳನ್ನು 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪ್ರತಿದಿನ ಕೃಷ್ಣೇಗೌಡರೊಂದಿಗೆ ಜ್ಯೋತಿ ಜಗಳ ತೆಗೆದು, ಕೆಲವು ವೇಳೆ ಹಲ್ಲೆ ಸಹ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ಜಗಳ ವಿಕೋಪಕ್ಕೆ ತಿರುಗಿ ಹರಿತವಾದ ಆಯುಧದಿಂದ ಹೊಡೆದು, ಕತ್ತುಹಿಸುಕಿ ಕೊಲೆ ಮಾಡಿದ್ದಾಳೆ. ಈ ಕೊಲೆಯನ್ನು ಮರೆಮಾಚಲು ಅಪಘಾತವಾಗಿದೆ ಎಂದು ಬಿಂಬಿಸಲು ಬೈಕ್ ಸಮೇತ ಮೃತದೇಹವನ್ನು ರೈಸ್ ಮಿಲ್ ಹತ್ತಿರ ರಸ್ತೆಗೆ ರಾತ್ರೋರಾತ್ರಿ ತಂದು ಹಾಕಿದ್ದಾರೆ. ಕೃಷ್ಣೇಗೌಡನನ್ನು ಕೊಲೆ ಮಾಡಲು ಜ್ಯೋತಿಯ ತಾಯಿ ಪುಟ್ಟಮ್ಮ ಕೂಡ ಸಾಥ್ ನೀಡಿದ ಆರೋಪ ಕೇಳಿ ಬಂದಿದೆ.

 

Share Post