ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ; ಒಬ್ಬನ ಬಂಧನ
ಹೈದರಾಬಾದ್; ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಐವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತರೆಂದು ಹೇಳಲಾಗುತ್ತಿದ್ದು, ಆರೋಪಿಗಳಿಗಾಗಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಆರೋಪಿಗಳಲ್ಲೊಬ್ಬ ಶಾಸಕರೊಬ್ಬರ ಮಗ ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವ ಪಡೆದುಕೊಂಡಿದೆ.
ಮೇ 28 ರಂದು ಹೈದರಾಬಾದ್‍ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪಬ್ ವೊಂದರಲ್ಲಿ ಪಾರ್ಟಿ ಮುಗಿಸಿದ ನಂತರ ಮನೆಗೆ ಬಿಡುತ್ತೇವೆ ಎಂದು ಹೇಳಿ ಬಾಲಕಿಯನ್ನು ಬೆಂಜ್ ಕಾರಿನಲ್ಲಿ ಕೂರಿಸಿಕೊಂಡ ಹುಡುಗರು, ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಐವರೂ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು 323 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 9 ಅನ್ನು ಪೋಕ್ಸೊ ಕಾಯಿದೆಯ 10 ರೊಂದಿಗೆ ಈ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಈ ಕುರಿತು ಮಾಹಿತಿ ಕೊಟ್ಟಿದ್ದು, ಆರೋಪಿಗಳ ಬಗ್ಗೆ ಸಂತ್ರಸ್ತೆ ಏನನ್ನೂ ಬಹಿರಂಗಪಡಿಸಿಲ್ಲ. ಆದರೆ ಆಕೆ ಒಬ್ಬನ ಹೆಸರನ್ನು ಮಾತ್ರ ತಿಳಿಸಿದ್ದಾಳೆ. ತಕ್ಷಣ ಅವನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಐದು ಆರೋಪಿಗಳ ಬಗ್ಗೆ ಪತ್ತೆ ಮಾಡಲಾಗಿದೆ. ಸಂತ್ರಸ್ತೆ ಪ್ರಸ್ತುತ ಯಾರನ್ನು ಗುರುತಿಸುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ.