ಕಲಬುರಗಿ ಬಸ್ ಅಪಘಾತ ಪ್ರಕರಣ; ಎಲ್ಲರೂ ಒಂದೇ ಕುಟುಂಬದವರು..!
ಕಲಬುರಗಿ; ಕಲಬುರಗಿಯ ಕಮಲಾಪುರದ ಹೊರವಲಯದಲ್ಲಿ ನಡೆದ ಖಾಸಗಿ ಬಸ್ ಅಪಘಾತ ಪ್ರಕರಣ ಸಂಬಂಧ ತನಿಖೆ ನಡೆಸಲು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸ್‌ನಲ್ಲಿದ್ದವರು ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದೆ. ಘಟನೆ ಹೇಗೆ ನಡೆಯಿತು..? ಅಪಘಾತಕ್ಕೆ ಏನು ಕಾರಣ ಎಂಬುದರ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದರು. ಇನ್ನು ಖಾಸಗಿ ಬಸ್ ಆದ್ದರಿಂದ ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕೆ ಸಾಧ್ಯವಿದೆಯಾ ಎಂಬುದರ ಬಗ್ಗೆ ಸಿಎಂ ಅವರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವ ಶ್ರೀರಾಮುಲು ಇದೇ ವೇಳೆ ಹೇಳಿದ್ದಾರೆ.
ಇನ್ನು ಬಸ್‌ನಲ್ಲಿದ್ದವರೆಲ್ಲಾ ಮೇ 29ರಂದು ಗೋವಾ ಪ್ರವಾಸಕ್ಕೆ ತೆರಳಿದ್ದರು. ಹೈದರಾಬಾದ್‌ನಿಂದ ಗೋವಾಕ್ಕೆ ತೆರಳಿದ್ದ ಒಂದೇ ಕುಟುಂಬದವರು ಇಂದು ಹೈದರಾಬಾದ್‌ಗೆ ಖಾಸಗಿ ಬಸ್‌ನಲ್ಲಿ ವಾಪಸ್ ಆಗುತ್ತಿದ್ದರು ಎಂಬ ಮಾಹಿತಿ ಇದೆ. ಹೈದರಾಬಾದ್‌ನಲ್ಲಿ ಐಟಿ ಉದ್ಯೋಗಿಯಾಗಿರುವ ಅರ್ಜುನ್ ಕುಮಾರ್ ಎಂಬುವವರ ಹೆಸರಿನಲ್ಲಿ ಎಲ್ಲರ ಟಿಕೆಟ್ ಬುಕ್ ಆಗಿತ್ತು ಎಂದು ತಿಳಿದುಬಂದಿದೆ.
ಇಂದು ಮುಂಜಾನೆ ಖಾಸಗಿ ಬಸ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿತ್ತು. ಈ ವೇಳೆ ಬಸ್‌ಗೆ ಬೆಂಕಿ ತಲುಗಿದ್ದರಿಂದ ಏಳು ಮಂದಿ ಸಜೀವದಹನವಾಗಿದ್ದರು. ಘಟನೆಯಲ್ಲಿ 16 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.