National

ರಾಹುಲ್‌ ಗಾಂಧಿಗೆ ಮತ್ತೆ ಸಮನ್ಸ್‌; ಜೂ.13ರಂದು ಹಾಜರಾಗಲು ED ಸೂಚನೆ

ನವದೆಹಲಿ; ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ರಾಹುಲ್‌ ಗಾಂಧಿಗೆ ಮತ್ತೆ ಸಮನ್ಸ್‌ ನೀಡಿದ್ದಾರೆ. ಜೂನ್‌ 13 ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸೂಚಿಸಲಾಗಿದೆ.

ಜೂನ್‌ 1 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಸಮನ್ಸ್‌ ಜಾರಿ ಮಾಡಿದ್ದರು. ಜೂನ್‌ 2 ರಂದು ರಾಹುಲ್‌ ಗಾಂಧಿ ಹಾಗೂ ಜೂನ್‌ 8 ರಂದು ಸೋನಿಯಾಗಾಂಧಿಯವರು ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಲಾಗಿತ್ತು. ಆದ್ರೆ ನಾನು ವಿದೇಶದಲ್ಲಿರುವುದರಿಂದ ಜೂನ್‌ 2 ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜೂನ್‌ 5 ರ ನಂತರ ಯಾವುದಾದರೂ ಒಂದು ದಿನಾಂಕ ಕೊಟ್ಟರೆ ವಿಚಾರಣೆಗೆ ಬರುತ್ತೇನೆ ಎಂದು ರಾಹುಲ್‌ ಗಾಂಧಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ರಾಹುಲ್‌ ಗಾಂಧಿಯವರ ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು ಜೂನ್‌ 13 ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ಸಮನ್ಸ್‌ ಮೂಲಕ ಸೂಚನೆ ನೀಡಿದ್ದಾರೆ. ಇನ್ನೂ ಸೋನಿಯಾಗಾಂಧಿಯವರು ಜೂನ್‌ 8 ರಂದು ವಿಚಾರಣೆಗೆ ಹಾಜರಾಗಬೇಕಿದೆ. ಆದ್ರೆ ಸೋನಿಯಾ ಅವರಿಗೆ ನಿನ್ನೆ ಕೊವಿಡ್‌ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಜೂನ್‌ 8 ರಂದು ವಿಚಾರಣೆಗೆ ಹಾಜರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

 

Share Post