ವಿಧಾನಪರಿಷತ್ಗೆ ವಿಜಯೇಂದ್ರ; ಮಂತ್ರಿ ಸ್ಥಾನ ಕೂಡಾ ಸಿಗುತ್ತಾ..?
ಬೆಂಗಳೂರು; ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರನ್ನು ವಿಧಾನಪರಿಷತ್ಗೆ ಶಿಫಾರಸು ಮಾಡಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ಕೋರ್ ಕಮಿಟಿ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಬಿ.ವೈ.ವಿಜಯೇಂದ್ರ ಅವರನ್ನು ಹೆಸರನ್ನೂ ಹೈಕಮಾಂಡ್ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಪರಿಷತ್ ಟಿಕೆಟ್ ನೀಡಬೇಕೆಂದು ಪ್ರಸ್ತಾಪಿಸಿದರು. ಇದಕ್ಕೆ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ಹೈಕಮಾಂಡ್ ಕಳುಹಿಸುವ ಪಟ್ಟಿಯಲ್ಲಿ ವಿಜಯೇಂದ್ರ ಹೆಸರೂ ಇರಲಿದೆ. ಎಲ್ಲಾ ಐದು ಸ್ಥಾನಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೈಕಮಾಂಡ್ಗೆ ಕಳುಹಿಸಲಾಗುತ್ತಿದೆ.
ಇನ್ನು ಸಭೆ ನಂತರ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪರಿಷತ್ಗೆ ವಿಜಯೇಂದ್ರ ಹೆಸರನ್ನು ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ. ವಿಜಯೇಂದ್ರ ಹೆಸರನ್ನು ಹೈಕಮಾಂಡ್ಗೆ ಕಳುಹಿಸುತ್ತೇವೆ. ಮೇಲಿನವರು ಟಿಕೆಟ್ ಕೊಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನು ಇದೇ 21 ಕ್ಕೆ ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ ಕೈಗೊಳ್ಳಲಿದ್ದಾರೆ.
ಚುನಾವಣೆ ನಡೆಯಲಿರುವ ಏಳು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಶಕ್ತಿ ಬಿಜೆಪಿಗಿದೆ. ಒಂದು ವೇಳೆ ಹೈಕಮಾಂಡ್ ವಿಜಯೇಂದ್ರಗೆ ಟಿಕೆಟ್ ಕನ್ಫರ್ಮ್ ಮಾಡಿದರೆ ಅವರು ಪರಿಷತ್ ಸದಸ್ಯರಾಗೋದು ಪಕ್ಕಾ. ಹಾಗೇನಾದರೂ ಆದರೆ, ಮಂತ್ರಿ ಸ್ಥಾನವೂ ಅವರಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.