National

ಸದ್ಯಕ್ಕೆ ಯಾರ ಮೇಲೂ ದೇಶದ್ರೋಹ ಪ್ರಕರಣ ಬೇಡ; ಸುಪ್ರೀಂ ಕೋರ್ಟ್‌

ನವದೆಹಲಿ: ಸದ್ಯಕ್ಕೆ ಯಾರ ಮೇಲೂ ದೇಶದ್ರೋಹ ಪ್ರಕರಣ ದಾಖಲಿಸದಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ದೇಶದ್ರೋಹ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ (ದೇಶದ್ರೋಹ) ಕಾನೂನನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ಪೂರ್ಣಗೊಳಿಸುವವರೆಗೆ ಈ ಕಾನೂನಿನಡಿಯಲ್ಲಿ ಪ್ರಕರಣಗಳನ್ನು ದಾಖಲಿಸದೇ ಇರುವಂತೆ ಕೋರ್ಟ್‌ ಸೂಚನೆ ನೀಡಿದೆ. ಕೇಂದ್ರ ಸರ್ಕಾರವು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸುವವರೆಗೆ ಸರ್ಕಾರಗಳು ದೇಶದ್ರೋಹ ಪ್ರಕರಣವನ್ನು ಬಳಸಿಕೊಳ್ಳುವಂತಿಲ್ಲ ಎಂದು ಪೀಠ ಆದೇಶಿಸಿದ್ದು, ಅರ್ಜಿಗಳ ವಿಚಾರಣೆಯನ್ನು ಜುಲೈಗೆ ಮುಂದೂಡಿದೆ.

ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಅಮಾನತಿನಲ್ಲಿ ಇರಿಸುವುದು ಸಾಧ್ಯವೇ ಎಂಬುದನ್ನು 24 ತಾಸುಗಳೊಳಗೆ ತಿಳಿಸಬೇಕು ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿತ್ತು. ಈ ಕಾಯ್ದೆಯ ಅಡಿಯಲ್ಲಿ ದಾಖಲಾಗಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಗತಿ ಏನು ಎಂದೂ ಕೋರ್ಟ್‌ ಪ್ರಶ್ನಿಸಿತ್ತು.

Share Post