Bengaluru

ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಾದ್ಯಂತ 50 ಸಾವಿರ ಎಕರೆ ಭೂ ಸ್ವಾಧೀನ : ಸಚಿವ ನಿರಾಣಿ

ಬೆಂಗಳೂರು; ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ತಕ್ಷಣವೇ ಭೂಮಿ ಮಂಜೂರು ಮಾಡಲು ಅನುಕೂಲವಾಗುವಂತೆ ರಾಜ್ಯಾದ್ಯಂತ 50 ಸಾವಿರ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಭಾರತೀಯ ಉತ್ಪಾದನಾ ಪ್ರದರ್ಶನದ ಕರ್ಟನ್ ರೈಸರ್ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವರ್ಷದ ನವೆಂಬರ್ 2ರಿಂದ 4ರವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2022ರ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ದೇಶ-ವಿದೇಶಗಳಿಂದ ಉದ್ಯಮಿಗಳು ಆಗಮಿಸಲಿದ್ದುಇದಕ್ಕಾಗಿಯೇ ರಾಜ್ಯಾದ್ಯಂತ  50 ಸಾವಿರ ಎಕರೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ದಯಮಿಗಳಿಗೆ ತತಕ್ಷಣವೇ ಭೂಮಿ, ನೀರು, ರಸ್ತೆ, ಸೇರಿದಂತೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾದರೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುವುದರ ಜೊತೆಗೆ ನಿರುದ್ಯೋಗ ನಿವಾರಣೆಯಾಗಲಿದೆ ಎಂಬ ವಿಶ್ವಾಸವನ್ನು ನಿರಾಣಿ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಆತ್ಮನಿರ್ಭರ ಭಾರತ ಯೋಜನೆಗೆ ಅನುಗುಣವಾಗಿ ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜಿಸುವುದರ ಜೊತೆಗೆ ಶೀಘ್ರದಲ್ಲೇ ರಾಜ್ಯ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ನೀತಿಯನ್ನು ಜಾರಿಗೆ ತರಲಿದೆ ಎಂದು ಹೇಳಿದರು. ಒಂದು ಜಿಲ್ಲೆ ಒಂದು ಉತ್ಪಾದನೆ ನೀತಿಯಿಂದ ಪ್ರತಿ ಜಿಲ್ಲೆಗೆ ಒಂದು ಉತ್ಪನ್ನವನ್ನು ಗುರುತಿಸಲಾಗುತ್ತದೆ. ಈ ಉತ್ಪನ್ನಗಳೊಂದಿಗೆ ತೊಡಗಿಸಿಕೊಂಡಿರುವ ಉದ್ಯಮಿಗಳು ಯೋಜನಾ ವೆಚ್ಚದ 35 ಪ್ರತಿಶತದಷ್ಟು ಕ್ರೆಡಿಟ್-ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿಯನ್ನು ಪ್ರತಿ ಯೂನಿಟ್‍ಗೆ ಗರಿಷ್ಠ 10 ಲಕ್ಷ ರೂಪಾಯಿ ಪಡೆಯಬಹುದು ಎಂದು ಸಚಿವ ನಿರಾಣಿ ಸಲಹೆ ಮಾಡಿದರು.

ರಾಜ್ಯದಾದ್ಯಂತ ಸಮತೋಲಿತ ಕೈಗಾರಿಕೀಕರಣವನ್ನು ಉತ್ತೇಜಿಸಿಸಲು ನಾವು ತೆಗೆದುಕೊಂಡಿರುವ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್. ಈ ಯೋಜನೆ ಮೂಲಕ ಹಲವು ಕೈಗಾರಿಕಾ ಸಮೂಹಗಳನ್ನು ಗುರುತಿಸಲಾಗಿದ್ದು, ಪ್ರತಿ ಕ್ಲಸ್ಟರ್‌ಗೆ ಆಯಾ ಉತ್ಪನ್ನ ವಲಯಕ್ಕೆ ನಿರ್ದಿಷ್ಟವಾದ ವಿಶೇಷ ಪ್ರೊತ್ಸಾಹ ಮತ್ತು ರಿಯಾಯಿತಿಗಳನ್ನು ಘೋಷಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೊಪ್ಪಳದಲ್ಲಿ ಟಾಯ್‍ ಕ್ಲಸ್ಟರ್ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಉದ್ದಿಮೆ ಬೆಂಬಲಿತ ಸೇವೆಗಳನ್ನು ಕ್ಲಸ್ಟರ್ ಒಳಗೊಂಡಿದೆ. ಅಲ್ಲಿನ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಸಾಮಾಜಿಕ ಮೂಲಸೌಕರ್ಯ ಮತ್ತು ವಸತಿ ಸೌಕರ್ಯಗಳನ್ನು ಹೊಂದಿದೆ ಎಂದು ನಿರಾಣಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಾರಾಯ ರಾಣೆ, ಏಸ್ ಮ್ಯಾನ್ಯುಕ್ಚರಿಂಗ್ ಸಿಸ್ಟಮ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಪಿ.ರಾಮದಾಸ್, ಸ್ಯಾಸ್‍ಮೋಸ್ ಹೆಇಟಿ ಟೆಕ್ನಾಲಜೀಸ್ ಲಿಮಿಟೆಡ್‍ನ ಸಂಸ್ಥಾಪಕ ಹೆಚ್‍ಜಿ.ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share Post