National

ಧ್ವನಿವರ್ಧಕಗಳು ಮೂಲಭೂತ ಹಕ್ಕಲ್ಲ; ಅಲಹಾಬಾದ್‌ ಹೈಕೋರ್ಟ್‌

ಲಖನೌ: ಧ್ವನಿವರ್ಧಕಗಳು ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಈ ರೀತಿ ಅಭಿಪ್ರಯಾಪಟ್ಟ ನ್ಯಾಯಮೂರ್ತಿ ವಿವೇಕ್ ಕುಮಾರ್ ಬಿರ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಅರ್ಜಿಯನ್ನು ವಜಾ ಮಾಡಿದೆ.

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಸಾಂವಿಧಾನಿಕ ಹಕ್ಕು ಅಲ್ಲ ಎಂದು ಕಾನೂನು ಹೇಳುತ್ತದೆ ಎಂದು ಕೋರ್ಟ್‌ ಹೇಳಿದೆ, 2021ರ ಡಿಸೆಂಬರ್ 3ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟರ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇರ್ಫಾನ್ ಎಂಬಾತ ಈ ಅರ್ಜಿ ಸಲ್ಲಿಸಿದ್ದ. ಮ್ಯಾಜಿಸ್ಟ್ರೇಟರ್‌ ಅದೇಶ ಕಾನೂನುಬಾಹಿರ. ಇದು ಮೂಲಭೂತ ಹಕ್ಕು ಮತ್ತು ಕಾನೂನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್‌ ಮೊರೆ ಹೋಗಲಾಗಿತ್ತು.

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ವಿವಾದವು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ಅನುಮತಿ ಪಡೆದು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು. ಧಾರ್ಮಿಕ ಸ್ಥಳಗಳಲ್ಲಿನ ಧ್ವನಿವರ್ಧಕಗಳ ಶಬ್ದವು ಆವರಣದ ಹೊರಗೆ ಕೇಳಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗಷ್ಟೇ ಹೇಳಿದ್ದರು. ಧ್ವನಿವರ್ಧಕಗಳಿಗೆ ಹೊಸ ಪರವಾನಗಿ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

Share Post