ಅಫ್ಘನಿಸ್ತಾನದಲ್ಲಿ ಮತ್ತೊಂದು ಕಠಿಣ ನಿರ್ಧಾರ; ಮಹಿಳೆಯರು ವಾಹನ ಚಲಾಯಿಸುವಂತಿಲ್ಲ..!
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರ, ಮಹಿಳೆಯರ ಹಕ್ಕುಗಳನ್ನು ಒಂದೊಂದೇ ಕಸಿದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಮಹಿಳೆಯರ ಶಿಕ್ಷಣವನ್ನು 6ನೇ ತರಗತಿವರೆಗೆ ನಿರ್ಬಂಧಿಸಿತ್ತು. ಇದೀಗ ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿ ನೀಡುವುದನ್ನೂ ಕೂಡಾ ತಾಲಿಬಾನ್ ಸರ್ಕಾರ ನಿಷೇಧ ಮಾಡಿದೆ.
ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿ ಆದೇಶ ಹೊರಡಿಸಲಾಗಿದೆ. ಕಾಬೂಲ್ ಸೇರಿದಂತೆ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಮಹಿಳೆಯರು ವಾಹನ ಚಲಾಯಿಸುತ್ತಾರೆ. ಆದ್ರೆ ಇದೀಗ ತಾಲಿಬಾನ್ ಸರ್ಕಾರ ಇದರ ಮೇಲೆ ನಿರ್ಬಂಧ ವಿಧಿಸಿದ್ದು, ಚಾಲನಾ ಪರವಾನಗಿ ನೀಡುವುದನ್ನು ನಿಲ್ಲಿಸಲಾಗಿದೆ.
ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮುಂದುವರಿದಿದೆ. ಅದರಲ್ಲೂ ಮಹಿಳೆಯರ ವಿರುದ್ಧ ಉಗ್ರವಾದಿ ಸರ್ಕಾರ ಇನ್ನಿಲ್ಲದ ನಿಯಮಗಳನ್ನು ಜಾರಿ ಮಾಡುತ್ತಲೇ ಇದೆ. ಮಹಿಳೆಯರಿಗೆ ಆರನೇ ತರಗತಿಗಿಂತ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಇದು ವಿಶ್ವಾದ್ಯಂತ ಖಂಡನೆಗೆ ಕಾರಣವಾಗಿತ್ತು. ಶಿಕ್ಷಕರ ಕೊರತೆಯ ಕಾರಣ ಈ ರೀತಿ ಮಾಡಲಾಗಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಬಯಸುವ ಹೆಣ್ಣುಮಕ್ಕಳಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿತ್ತು.