ವೈದ್ಯಕೀಯ ಶಿಕ್ಷಣ ಅಭಿವೃದ್ಧಿ ಸರ್ಕಾರ ಶ್ರಮ; ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು; ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾವಣೆ ಕಂಡಿದೆ. ಪ್ರತೀ ವರ್ಷ 65000 ಎಂಬಿಬಿಎಸ್ ವೈದ್ಯರು ಮತ್ತು 30,000 ವೈದ್ಯರು ಸ್ನಾತಕೋತ್ತರ ಪದವಿ ಪಡೆದು ಸೇವೆಗೆ ಲಭ್ಯರಾಗುತ್ತಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜಿನ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಮಹಿಳಾ ಸಬಲೀಕರಣದ ಸಂಕೇತ. ಸಮಾಜದಲ್ಲಿ ಬದಲಾವಣೆಗಳು ಆಗುತ್ತಿವೆ. ಬಡವರ ಮಕ್ಕಳು ಕೂಡ ವೈದ್ಯರಾಗಬೇಕೆಂಬ ಕನಸು ಈಡೇರುತ್ತಿದೆ ಎಂದು ಹೇಳಿದರು.
ಬೆಂಗಳೂರು ಮೆಕಲ್ ಕಾಲೇಜು (ಬಿಎಂಸಿ) ದೇಶದ ಹೆಮ್ಮೆಯ ಕಾಲೇಜುಗಳುಗಳಲ್ಲಿ ಒಂದು. ಇಲ್ಲಿ ಪ್ರವೇಶ ಪಡೆಯುವ ಕನಸು ಹಲವು ವಿದ್ಯಾರ್ಥಿಗಳಿಗೆ ಇರುತ್ತದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಅದೃಷ್ಟವಂತರಲ್ಲಿ ಅದೃಷ್ಟವಂತರು. ಅತ್ಯುತ್ತಮ ಸಂಸ್ಥೆಯಲ್ಲಿ ಕಲಿತನ ಅನುಭವ ಜೊತೆಗೆ ಸಮಾಜದಲ್ಲಿ ವಿಭಿನ್ನ ಮತ್ತು ವಿಶಿಷ್ಟ ಗೌರವ ಸಿಗುತ್ತದೆ. ವೈದ್ಯರಿಗೆ ಸಮಾಜದ ಎಲ್ಲಾ ಕಡೆಯೂ ವಿಶಿಷ್ಟ ಗೌರವ ಇದೆ. ವೈದ್ಯ ವಿದ್ಯಾರ್ಥಿಗಳು, ಪದವಿ ಪಡೆದವರು ಈ ಸಮಾಜದ ಹೆಮ್ಮೆ ಎಂದು ಸುಧಾಕರ್ ತಿಳಿಸಿದರು.
ಕರ್ನಾಟಕದಲ್ಲಿ ಒಟ್ಟು 65 ಮೆಡಿಕಲ್ ಕಾಲೇಜುಗಳಿವೆ. 4 ಸರ್ಕಾರಿ ಮೆಡಿಕಲ್ ಕಾಲೇಜುಗಳು ಶೀಘ್ರದಲ್ಲಿ ಆರಂಭವಾಗಲಿವೆ. ಖಾಸಗಿಯಲ್ಲಿ 3 ಹೆಚ್ವುವರಿ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ 9 ಜಿಲ್ಲೆಗಳಲ್ಲಿ ಹೊಸತಾಗಿ 9 ಮೆಡಿಕಲ್ ಕಾಲೇಜುಗಳು ಆರಂಭ ಮಾಡಲು ತಯಾರಿಗಳು ನಡೆಯುತ್ತಿವೆ. ದೇಶದ ವೈದ್ಯ ವಿದ್ಯಾರ್ಥಿಗಳಲ್ಲಿ ಶೇಕಡಾ 30.5 ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. 2014ಕ್ಕೂ ಮೊದಲು ದೇಶದಲ್ಲಿ ಕೆಲವೇ ಕೆಲವು ಮೆಡಿಕಲ್ ಕಾಲೇಜಿಗಳಿದ್ದವು. ಆದರೆ ಕಳೆದ 7 ವರ್ಷಗಳಲ್ಲಿ ಹೊಸತಾಗಿ 150 ಕ್ಕೂ ಅಧಿಕ ಮೆಡಿಕಲ್ ಕಾಲೇಜುಗಳು ಆರಂಭವಾಗಿವೆ. 65,000 ಎಂಬಿಬಿಎಸ್ ಡಾಕ್ಟರ್ ಗಳು ಪ್ರತೀ ವರ್ಷ ಹೊರ ಬರುಯತ್ತಾರೆ. 30,000 ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಸಮಾಜ ಸೇವೆಗೆ ಲಭ್ಯರಾಗುತ್ತಿದ್ದಾರೆ. ವೈದ್ಯಕೀಯ ಶಿಕ್ಷಣದ ಕ್ಷೇತ್ರ ದುಬಾರಿ ವೆಚ್ಚವನ್ನು ಬಯಸುತ್ತಿದೆ. ಆದರೆ ಇದನ್ನು ಸರ್ಕಾರ ಹಂತ ಹಂತವಾಗಿ ಕಡಿಮೆ ಮಾಡಲು ಯೋಜನೆ ರೂಪಿಸಿದೆ. ಬಡವರಿಗೂ ಸಹ ವೈದ್ಯಕೀಯ ಶಿಕ್ಷಣ ಸಿಗಬೇಕು ಅನ್ನುವುದೇ ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ ಎಂದು ಹೇಳಿದರು.