ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ; ದಾಖಲೆ ಒದಗಿಸುವಂತೆ ಪ್ರಿಯಾಂಕ್‌ಗೆ ನೋಟಿಸ್
ಬೆಂಗಳೂರು: 543 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಪ್ರಕರಣ ಸಂಬಂಧ ಶಾಸಕ ಪ್ರಿಯಾಂಕ್ ಖರ್ಗೆ, ಆಡಿಯೋ ಒಂದನ್ನು ರಿಲೀಸ್ ಮಾಡಿದ್ದರು. ಹೀಗಾಗಿ ಸಿಐಡಿ ಅಧಿಕಾರಿಗಳು ಪ್ರಕರಣ ಸಂಬಂಧ ನಿಮ್ಮ ಬಳಿ ಇರುವ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ನೀಡಿ ಎಂದು ನೋಟಿಸ್ ನೀಡಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಸಿಐಡಿ ಕಚೇರಿಗೆ ಹಾಜರಾಗಿ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸ್ವತಃ ಪ್ರಿಯಾಂಕ್ ಖರ್ಗೆ ಅವರೇ ಟ್ವೀಟ್ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು ದಾಖಲೆ ಒದಗಿಸುವಂತೆ ನನಗೆ ಸೂಚನೆ ನೀಡಿದ್ದಾರೆ. ಪುರಾವೆಗಳನ್ನು ಗ್ರಹಿಸಲು ಆಗದ ಇಲಾಖೆಯ ಅಸಮರ್ಥತೆಯನ್ನು ಇದು ತೋರಿಸುತ್ತದೆ. ಈ ರೀತಿಯ ಬೆದರಿಸುವ ತಂತ್ರ ನಡೆಯೋದಿಲ್ಲ. ಪಿಎಸ್‍ಐ ಪರೀಕ್ಷೆ ಬರೆದಿರು 57,000 ಯುವಕರಿಗೆ ಉತ್ತರಿಸಬೇಕಿದೆ ಎಂದಿದ್ದಾರೆ.