ಆರೋಗ್ಯ ಇಲಾಖೆಯಲ್ಲಿ ಹಾಜರಾತಿ ಆಧರಿಸಿ ವೇತನ ಪಾವತಿ ವ್ಯವಸ್ಥೆ; ಡಾ.ಕೆ.ಸುಧಾಕರ್
ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆ ಕಡ್ಡಾಯಗೊಳಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ
ಸೋಮವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಸ್ಪತ್ರೆ, ಇಲಾಖೆ ಕಚೇರಿ ಮತ್ತು ಸಂಸ್ಥೆಗಳಲ್ಲಿ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದಿರುವ ಬಗ್ಗೆ ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನಿಜವಾದ ಕಾರಣಗಳಿಲ್ಲದೆ ಕೆಲಸ ಕದಿಯುವುದನ್ನು ಸಹಿಸಲು ಆಗುವುದಿಲ್ಲ. ಅವರ ಕರ್ತವ್ಯಲೋಪದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಹೀಗಾಗಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದ ಯಾರೇ ಆಗಲಿ ಅಂತಹವರ ವೇತನ ಕಡಿತಕ್ಕೆ ಸೂಚನೆ ನೀಡಲಾಗಿದೆ. ಇಲಾಖೆ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೂ ಅವರ “ಆಧಾರ್ “ ಆಧರಿತ ಬಯೋಮೆಟ್ರಿಕ್ ಹಾಜರಾತಿ (ಎಇಬಿಎಎಸ್) ಕಡ್ಡಾಯಗೊಳಿಸಲಾಗಿದೆ. ಅದನ್ನು ಆಧರಿಸಿಯೇ ಇನ್ನು ಮುಂದೆ ವೇತನ ನೀಡುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.
ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಕಳೆದ ಎರಡು ತಿಂಗಳ ಹಿಂದಿನಿಂದಲೇ ಮತ್ತೆ ಕಡ್ಡಾಯಗೊಳಿಸಲಾಗಿದೆ. ಅನೇಕ ಸಭೆಗಗಳಲ್ಲಿ ಮತ್ತು ಸುತ್ತೋಲೆ ಮೂಲಕವೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಆದರೂ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಾಜರಾತಿ ದಾಖಲಿಸದಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗ ಸ್ಪಷ್ಟ ಎಚ್ಚರಿಕೆ ಜತೆಗೆ ಅಧಿಕೃತ ಆದೇಶ ನೀಡಿದ್ದುಅಂತಹ ಪ್ರಕರಣಗಳನ್ನು ಗೈರು ಹಾಜರಿ ಎಂದು ಪರಿಗಣಿಸಿ ವೇತನ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.