Districts

ಹುಬ್ಬಳ್ಳಿ ಗಲಭೆ ಪ್ರಕರಣ; ಮಾಸ್ಟರ್‌ ಮೈಂಡ್‌ ಎನ್ನಲಾದ ಮೌಲ್ವಿ ವಸೀಂ ವಿಡಿಯೋ ಸಂದೇಶ

ಹುಬ್ಬಳ್ಳಿ; ಹಳೇ ಹುಬ್ಬಳ್ಳಿಯಲ್ಲಿ ಕಳೆದ ಶನಿವಾರ ರಾತ್ರಿ ನಡೆದ ಗಲಭೆಗೆ ಪ್ರಮುಖ ಕಾರಣ ಎನ್ನಲಾದ ಮೌಲ್ವಿ ವಸೀಂ, ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಗಲಭೆಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಯಾರನ್ನೂ ಪ್ರಚೋದನೆ ಮಾಡಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

ಘಟನೆಗೆ ನಾನೇ ಮಾಸ್ಟರ್‌ ಮೈಂಡ್‌ ಎಂದು ಬಿಂಬಿಸಲಾಗುತ್ತಿದೆ. ಆದ್ರೆ ಅಂದು ನಾನು ಯಾವುದೇ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿಲ್ಲ. ಹುಡುಗರನ್ನು ಗಲಾಟೆ ಮಾಡುತ್ತಿದ್ದರು. ಅದು ಮಿತಿಮೀರಿದಾಗ ಅವರನ್ನು ಸಮಾಧಾನ ಮಾಡಿ, ಮನೆಗೆ ಕಳುಹಿಸಲು ಪ್ರಯತ್ನ ಪಟ್ಟೆ. ಅಲ್ಲಿ ಮೈಕ್‌ ಇರಲಿಲ್ಲ. ಹೀಗಾಗಿ ನಾನು ಹೇಳುವುದು ಅವರಿಗೆ ಕೇಳುತ್ತಿರಲಿಲ್ಲ. ಹೀಗಾಗಿ ಪೊಲೀಸರೇ ಜೀಪ್‌ ಮೇಲೆ ಹತ್ತು ಸಮಾಧಾನಪಡಿಸಬೇಕೆಂದು ಹೇಳಿದರು. ಅದಕ್ಕಾಗಿ ನಾನು ಜೀಪ್‌ ಮೇಲೆ ಹತ್ತಿದ್ದೆ ಎಂದು ಮೌಲ್ವಿ ವಸೀಂ ಸ್ಪಷ್ಟನೆ ಕೊಟ್ಟಿದ್ದಾರೆ.

ಜೀಪ್‌ ಮೇಲೆ ಹತ್ತಿ ಎಲ್ಲರೂ ಸೈಲೆಂಟಾಗಿ. ಮನೆಗೆ ಹೋಗಿ ಎಂದು ನಾನು ಮನವಿ ಮಾಡಿದ್ದೆ. ನಾನು ಅಲ್ಲಿ ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಯಾವ ವಿಡಿಯೋದಲ್ಲೂ ನಾನು ಜನರನ್ನು ಪ್ರೇರೇಪಣೆ ಮಾಡಿಲ್ಲ. ನನಗೆ ನಂಬಿಕೆ ಇದೆ. ಸತ್ಯ ಯಾವತ್ತೂ ಗೆಲ್ಲುತ್ತೆ ಅಂತ ವಸೀಂ ಇದೇ ವಿಡಿಯೋದಲ್ಲಿ ಹೇಳಿದ್ದಾರೆ. ಶೀಘ್ರದಲ್ಲೇ ಜನರ ಮುಂದೆ ಬಂದು ಎಲ್ಲವನ್ನೂ ವಿವರಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.

Share Post