Districts

2023ರ ಚುನಾವಣೆಗೆ ಬಿಜೆಪಿಯಿಂದ ಸಕಲ ಸಿದ್ಧತೆ; ಮಾಜಿ ಸಿಎಂ ಯಡಿಯೂರಪ್ಪ

ದಾವಣಗೆರೆ: ರಾಜ್ಯದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಉದ್ದೇಶ ರಾಜ್ಯ ಬಿಜೆಪಿ ಸರ್ಕಾರಕ್ಕಿಲ್ಲ. ಬದಲಾಗಿ ನಾವು 2023ರ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಚುನಾವಣೆ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ಮಾಡುತ್ತಾರೆ. ನಾವು ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.

 ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸಿ, ಜನರ ವಿಶ್ವಾಸವನ್ನು ಮತ್ತಷ್ಟು ಗಳಿಸುತ್ತೇವೆ. ಅದಕ್ಕಾಗಿ ಮುಂದಿನ ವಾರದಿಂದ ರಾಜ್ಯ ಪ್ರವಾಸ ಆರಂಭಿಸುತ್ತಿದ್ದೇವೆ. ಪ್ರತಿ ಜಿಲ್ಲೆಗೂ ಭೇಟಿ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್‌ ಮುಗ್ಗರಿಸುತ್ತಾ ಬಂದಿದೆ. ಇಲ್ಲೂ ಕೂಡಾ ಅದೇ ಆಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು. ಕಮಿಷನ್ ವಿಚಾರವಾಗಿ ಸಾಕ್ಷಿ ಕೊಡಲು ಆಗುತ್ತಾ? ಎಂಬ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ ಸ್ವಾಮೀಜಿಗಳು ಬೇಜವಾಬ್ದಾರಿತನದ ಹೇಳಿಕೆ ನೀಡಬಾರದು ಎಂದು ಬಿಎಸ್‌ವೈ ಇದೇ ವೇಳೆ ಮನವಿ ಮಾಡಿದರು.

Share Post