National

ಕಣ್ಣಿಗೆ ಬಟ್ಟೆ ಕಟ್ಟಿ ಭಾವಿ ಪತಿಯ ಕತ್ತು ಕುಯ್ದ ವಧು

ಹೈದರಾಬಾದ್​(ತೆಲಂಗಾಣ); ಕಣ್ಣಾಮುಚ್ಚಾಳೆ ಆಟದ ನೆಪದಲ್ಲಿ ಭಾವಿ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿದ ವಧುವೊಬ್ಬಳು, ಭಾವೀ ಪತಿಯ ಕತ್ತು ಕುಯ್ದು ಪರಾರಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಡುಗುಳ ಮಂಡಲಘಟ್ಟ ರಸ್ತೆಯ ಅಡ್ಡೆಪಲ್ಲಿ ರಾಮಾನಾಯುಡು ಹಾಗೂ ರವಿಕಮಠಂನ ವಿಯ್ಯಪು ಪುಷ್ಪ ಅವರ ವಿವಾಹ ನಿಶ್ಚಯವಾಗಿತ್ತು. ಆದ್ರೆ, ಪುಷ್ಪಗೆ ಈ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ರಾಮಾನಾಯುಡು ಜೊತೆ ಆಟವಾಡುವ ನಾಟಕ ಮಾಡಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ಅನಂತರ ಏಕಾಏಕಿ ಚಾಕುವಿನಿಂದ ಕತ್ತು ಕುಯ್ದಿದ್ದಾಳೆ ಎಂದು ತಿಳಿದುಬಂದಿದೆ. 

  ಮೇ 20ಕ್ಕೆ ಇವರಿಬ್ಬರ ವಿವಾಹ ನಿಗದಿಯಾಗಿತ್ತು. ಇವರಿಬ್ಬರು ಸೋಮವಾರ ವಡ್ಡಾಡಿಯಲ್ಲಿ ಖರೀದಿಗೆಂದು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಶಾಪಿಂಗ್ ಮುಗಿಸಿ ಅನಕಾಪಲ್ಲಿ ಜಿಲ್ಲೆ ಬುಚ್ಚಯ್ಯ ಪೇಟೆ ಮಂಡಲದ ಕೋಮಲ್ಲಪುಡಿ ಉಪನಗರದಲ್ಲಿರುವ ಬಾಬಾ ಆಶ್ರಮದಲ್ಲಿ ಸಮಯ ಕಳೆಯಲೆಂದು ಗಾಡಿ ನಿಲ್ಲಿಸಿದ್ದರು.   ಈ ವೇಳೆ ಈ ಕೃತ್ಯ ಎಸಗಲಾಗಿದೆ.

    ನಂತರ ಆಕೆಯೇ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ.  ಆಸ್ಪತ್ರೆಗೆ ಸೇರಿಸಿದ ಪುಷ್ಪ, ಯುವಕನ ಗಂಟಲಿಗೆ ಏನೋ ಇರಿದಿದೆ ಎಂದು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.  ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಸ್ಥಿತಿ ಗಂಭೀರವಾಗಿದ್ದರಿಂದ ಅನಕಾಪಲ್ಲಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Share Post