ಧರ್ಮದ ಅಫೀಮು ತಿಂದಿದ್ದೇವೆ, ಅದು ನಮ್ಮನ್ನ ದಾರಿ ತಪ್ಪಿಸ್ತಿದೆ; ಸಂಸದ ವಿ.ಶ್ರೀನಿವಾಸ ಪ್ರಸಾದ್
ಚಾಮರಾಜನಗರ: ಧರ್ಮ ಎಂಬುದ ಮನುಷ್ಯ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಆದ್ರೆ, ನಾವು ಧರ್ಮವನ್ನು ವೈಭವೀಕರಣ ಮಾಡುತ್ತಿದ್ದೇನೆ. ಧರ್ಮದ ಅಫೀಮನನ್ನು ನಾವು ಮೈಗೇರಿಸಿಕೊಂಡಿದ್ದು, ಆ ನಶೆ ನಮ್ಮನ್ನು ಏನೇನೋ ಮಾಡಿಸುತ್ತಿದೆ. ನಮ್ಮನ್ನು ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಮಾತನಾಡಿದ ಅವರು, ನಮ್ಮದು ಜಾತ್ಯತೀತ ರಾಷ್ಟ್ರ. ಎಲ್ಲ ಧರ್ಮಗಳನ್ನು, ಅವುಗಳ ವಿಧಿ ವಿಧಾನಗಳನ್ನು ನಾವೆಲ್ಲರೂ ಗೌರವಿಸಬೇಕು. ಎಲ್ಲರನ್ನೂ ಸಹೋದರರಂತೆ ಕಾಣಬೇಕು. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗಳನ್ನು ನೋಡಿದರೆ ವಿಷಾದವೆನಿಸುತ್ತದೆ. ಇಂತಹದ್ದು ನಡೆಯಬಾರದು ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.
ರಾಜ್ಯದ ಅಲ್ಲಲ್ಲಿ ನಡೆದಿರುವ ಘಟನೆಗಳಿಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ಸರ್ಕಾರ ತಕ್ಷಣವೇ ಅಂತಹ ಘಟನೆಗಳನ್ನು ತಡೆಯಲು ಕ್ರಮ ತೆಗೆದುಕೊಂಡಿದೆ. ಇಂತಹ ಘಟನೆಗಳಿಗೆ ರಾಜ್ಯದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಕೂಡಾ ಸ್ಪಷ್ಟವಾಗಿ ಹೇಳಿದ್ದಾರೆ ಎಂದೂ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.