ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ; ಸಿಸಿಟಿವಿಗಳಲ್ಲಿ ಸಿಗುತ್ತಿಲ್ಲ ಸಾಕ್ಷ್ಯ..?
ಹುಬ್ಬಳ್ಳಿ: ಶನಿವಾರ ರಾತ್ರಿ ಹುಬ್ಭಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪಿಗಳನ್ನು ಬಂಧಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈಗಾಗಲೇ ಕೆಲವರನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಲಾಗುತ್ತಿದೆ. ಆದ್ರೆ ಶನಿವಾರ ರಾತ್ರಿ ನೂರಾರು ಜನರು ಕಲ್ಲುತೂರಾಟ ನಡೆಸಿ, ಉದ್ವಿಗ್ವ ಪರಿಸ್ಥಿತಿಗೆ ಕಾರಣರಾಗಿದ್ದರು. ಅವರನ್ನು ಸಿಸಿಟಿವಿ ದೃಶ್ಯಾವಳಿ ಮೂಲಕ ಗುರುತಿಸಿ, ಬಂಧಿಸಲು ಪೊಲೀಸರು ತೀರ್ಮಾನಿಸಿದ್ದರು. ಆದ್ರೆ, ಹಳೇ ಹುಬ್ಬಳ್ಳಿ ಭಾಗದಲ್ಲಿ ಅಳವಡಿಸಿದ್ದ ಹಲವಾರು ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ, ಪೊಲೀಸರ ತನಿಖೆಗೆ ಹಿನ್ನಡೆಯಾಗಿದೆ.
ಗಲಭೆ ನಡೆದ ಪ್ರದೇಶದ ಸುತ್ತಮುತ್ತ ಸುಮಾರು 48 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವುಗಳನ್ನು ವರ್ಟಿಕ್ಸ್ ಎಂಬ ಏಜೆನ್ಸಿ ನಿರ್ವಹಣೆ ಮಾಡುತ್ತಿದೆ. ಆ ಏಜೆನ್ಸಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹಲವು ಸಿಸಿಟಿವಿಗಳು ಕೆಟ್ಟುಹೋಗಿವೆ. ಅಳವಡಿಸಿರುವ 48 ಸಿಸಿಟಿವಿಗಳಲ್ಲಿ 21 ಕ್ಯಾಮರಾಗಳು ಮಾತ್ರ ಕೆಲಸ ಮಾಡುತ್ತಿವೆ. ಏಳು ಕ್ಯಾಮರಾಗಳು ನಾಪತ್ತೆಯಾಗಿವೆ. ಉಳಿದವು ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ದಾಳಿ ಮಾಡಿದವರನ್ನು ಕಂಡುಹಿಡಿಯುವುದು ಪೊಲೀಸರು ಕಷ್ಟವಾಗಿದೆ. ಜೊತೆಗೆ ಪ್ರಮುಖ ಸಾಕ್ಷ್ಯಗಳೂ ಪೊಲೀಸರಿಗೆ ಸಿಗುತ್ತಿಲ್ಲ.