ವರ್ಕ್ ಆರ್ಡರ್ ಮೊದಲೇ ನಾನೂ ಹತ್ಹತ್ತು ಕೋಟಿ ಕೆಲಸ ಮಾಡಿಸ್ತೀನಿ; ರಮೇಶ್ ಜಾರಕಿಹೊಳಿ
ಬೆಳಗಾವಿ: ಇಲಾಖೆಗಳ ಕಾರ್ಯಾದೇಶ ಪತ್ರ ಸಿಗುವ ಮೊದಲೇ ಅಥವಾ ಟೆಂಡರ್ ಕರೆಯದೆ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವ ವ್ಯವಸ್ಥೆ ಹೊಸದೇನಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಹೀಗೆಯೇ ನಡೆಯುತ್ತದೆ ಎಂದು ರಮೇಶ್ ಜಾರಕಿಹೊಳಿ ಮಾತನಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ ತಾಲ್ಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿ ಸಂತೋಷ್ ಬಂಧುಗಳು ಹಾಗೂ ಬೆಂಬಲಿಗರ ಎದುರು ಗುರುವಾರ ಅವರು ಮಾತನಾಡಿದ್ದರು. ಅದರ ವಿಡಿಯೋ ಯಾರೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ಸಂತೋಷ್ ಪಾಟೀಲ ನನಗೆ ಕರೆ ಮಾಡಿದ್ದ. ಇವೆಲ್ಲವೂ ಅಕ್ರಮ ಕೆಲಸಗಳಿವೆ. ಟಿವಿಗಳ ಮುಂದೆ ಹೋಗಬೇಡ. ಆಗುವುದೂ ಇಲ್ಲ. ನಿನ್ನ ದುಡ್ಡನ್ನು ಪಡೆದುಕೊಳ್ಳುವುದರತ್ತ ನೋಡಿಕೋ ಎಂದು ತಿಳಿಸಿದ್ದೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ನಾನೂ ಗೋಕಾಕದಲ್ಲಿ ಯಾವುದೇ ಕಾರ್ಯಾದೇಶವಿಲ್ಲದೆ ಹತ್ಹತ್ತು ಕೋಟಿ ರೂಪಾಯಿ ಕೆಲಸ ಮಾಡಿಸ್ತೀನಿ. ಕೆಳಗಿನಿಂದ ಮೇಲಿನವರೆಗೂ ಹೋಗಬೇಕಾಗುತ್ತದೆ. ನಂತರ ಬಿಲ್ ಕೊಡುತ್ತಾರೆ. ಸಂತೋಷ್ ತನ್ನ ಮನೆ ಕೆಲಸವನ್ನೇನೂ ಮಾಡಿಕೊಂಡಿಲ್ಲ. ಜಾತ್ರೆ ವೇಳೆ ಗ್ರಾಮದ ಕೆಲಸ ಮಾಡಿದ್ದಾನೆ ಎಂದು ಕೂಡಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ತಪ್ಪು ಮಾಡಿದ್ದರೆ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಲಿ. ಆದರೆ, ಸಂತೋಷ್ ಆತ್ಮಹತ್ಯೆ ನಿರ್ಧಾರಕ್ಕೆ ಆತ ಬಂದಿದ್ದೇಕೆ ಎನ್ನುವುದೇ ಪ್ರಶ್ನೆ. ವಾರದ ಹಿಂದೆ, ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಫೋನ್ ಮಾಡಿದ್ದನಂತೆ. ಸಾಹುಕಾರ್ ಮಂತ್ರಿ ಆಗುತ್ತಾರೆ. ಆಗ ಎಲ್ಲವೂ ಸರಿಯಾಗಲಿದೆ. ನನಗೇನು ಭಯ ಎಂದು ಖುಷಿಯಿಂದ ಹೇಳಿದ್ದನಂತೆ. ಹೀಗಾಗಿ ಅವನ ಸಾವು ಪ್ರಶ್ನೆಯಾಗಿಯೇ ಉಳಿದಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.