National

ಇಂಗ್ಲೀಷ್‌ಗೆ ಪರ್ಯಾಯವಾಗಿ ಹಿಂದಿ ಬಳಸಿ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ

ನವದೆಹಲಿ: ದೇಶದಲ್ಲಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಅಧಿಕೃತ ಭಾಷಾ ಸಂಸದೀಯ ಸಮಿತಿಯ 37ನೇ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸದ್ಯ ಸಚಿವ ಸಂಪುಟದ ಶೇ.70ರಷ್ಟು ಕಾರ್ಯಸೂಚಿ ಹಿಂದಿಯಲ್ಲೇ ಸಿದ್ಧವಾಗುತ್ತಿದೆ. ಅಧಿಕೃತ ಭಾಷೆ ಹಿಂದಿಯನ್ನು ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಇದೀಗ ಒದಗಿಬಂದಿದೆ ಎಂದರು.

ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಬಳಸಬೇಕೇ ಹೊರತು ಸ್ಥಳೀಯ ಭಾಷೆಗಳಿಗೆ ಬದಲಾಗಿ ಅಲ್ಲ. ವಿವಿಧ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸುವಾಗ ಭಾರತದ ಭಾಷೆಯನ್ನು ಬಳಸಬೇಕು ಎಂದು ಅಮಿತ್‌ ಶಾ ಇದೇ ವೇಳೆ ಕರೆ ನೀಡಿದರು. ಈಶಾನ್ಯದ 8 ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಶಾನ್ಯದ ಒಂಬತ್ತು ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಾಗರಿಗೆ ಪರಿವರ್ತಿಸಿವೆ. ಇದಲ್ಲದೆ, ಈಶಾನ್ಯದ ಎಂಟು ರಾಜ್ಯಗಳು ಶಾಲೆಗಳಲ್ಲಿ 10 ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ ಎಂದು ಅಮಿತ್‌ ಶಾ ಇದೇ ವೇಳೆ ಸಭೆಗೆ ತಿಳಿಸಿದರು.

Share Post