ವೀಸಾ ಅವಧಿ ಮುಗಿದರೂ ಭಾರತದಲ್ಲೇ ಇರುವ 4 ಲಕ್ಷ ವಿದೇಶಿಗರು..!
ನವದೆಹಲಿ: ವೀಸಾ ಅವಧಿ ಮುಗಿದ್ದರೂ ಲಕ್ಷಾಂತರ ವಿದೇಶಿಗರೂ ಭಾರತದಲ್ಲೇ ತಲೆಮರೆಸಿಕೊಂಡಿದ್ದಾರೆ. ಸುಮಾರು 3.93 ಲಕ್ಷ ವಿದೇಶಿಗರು ಅಕ್ರಮವಾಗಿ ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಹೀಗಂತ ಕೇಂದ್ರ ಸರ್ಕಾರವೇ ಲೋಕಸಭೆಯಲ್ಲಿ ಹೇಳಿದೆ. 2021ರ ಡಿಸೆಂಬರ್ ವರೆಗಿನ ಅಂಕಿಅಂಶದ ಪ್ರಕಾರ ಸುಮಾರು 3.93 ಲಕ್ಷ ವಿದೇಶಿಗರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಹೇಳಿದ್ದಾರೆ.
2019ರಲ್ಲಿ 25,143 ವಿದೇಶಿಗರ ವೀಸಾ ಅವಧಿ ಮುಗಿದಿದೆ. ಆದ್ರೆ, ಅವರು ಯಾರೂ ಭಾರತದಿಂದ ನಿರ್ಗಮಿಸಿಲ್ಲ. ಇನ್ನು 2020ರಲ್ಲಿ 40,239 ವಿದೇಶಿಗರು, 2021ರಲ್ಲಿ 54,576 ವಿದೇಶಿಗರ ವೀಸಾ ಅವಧಿ ಮುಗಿದಿದೆ. ಇವರು ಕೂಡಾ ತಮ್ಮ ದೇಶಗಳಿಗೆ ವಾಪಸ್ ಹೋಗಿಲ್ಲ. ಹೀಗಾಗಿ 2019ರಿಂದ ಡಿಸೆಂಬರ್ 31, 2021ರ ವರೆಗೆ ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲೇ ನೆಲೆಸಿರುವ ವಿದೇಶಿಗರ ಸಂಖ್ಯೆ 3,93,421′ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸಚಿವ ನಿತ್ಯಾನಂದ ರೈ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. ವೀಸಾ ಅವಧಿ ಮುಗಿದ ನಂತರ ಅಕ್ರಮವಾಗಿ ರಾಷ್ಟ್ರದಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರೈ ಹೇಳಿದ್ದಾರೆ.