Bengaluru

ಜೂನ್‌ 16 ರಿಂದ ಸಿಇಟಿ ಪರೀಕ್ಷೆ ; ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು: ಜೂನ್ 16, 17 ಮತ್ತು 18ರಂದು ವೃತ್ತಿಶಿಕ್ಷಣಕ್ಕೆ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ಈಗಾಗಲೇ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿದೆ. ಆ ದಿನಾಂಕಗಳನ್ನು ತಿಳಿದುಕೊಂಡು ಇಲ್ಲಿ ಪರೀಕ್ಷೆ ನಿಗದಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಜೂನ್ 16ರಂದು ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಸಲಾಗುತ್ತದೆ. ಜೂನ್‌ 18 ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 5ರಿಂದ 20 ರವರೆಗೆ ತಮ್ಮ ಹೆಸರು ನೋಂದಾಯಿಸಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ಆನ್ಲೈನ್ ಮೂಲಕವೇ ನಿಗದಿತ ಶುಲ್ಕ ಸಲ್ಲಿಸಲು ಏ. 22ರವರೆಗೆ ಅವಕಾಶವಿದೆ ಎಂದು ಸಚಿವರು ತಿಳಿಸಿದ್ದಾರೆ. ಮೇ 30ರಿಂದ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವರು ವಿವರಿಸಿದ್ದಾರೆ.

Share Post