ವಿದ್ಯಾರ್ಥಿಗಳ ಭಿವಿಷ್ಯ ಹಾಳುಮಾಡುವುದು ಸರಿಯಲ್ಲ: ಸಿದ್ದು ಹೇಳಿಕೆಗೆ ಅವರೇ ಉತ್ತರ ನೀಡ್ತಾರೆ ಎಂದ ಡಿಕೆಶಿ
ಬೆಂಗಳೂರು: ಹಿಜಾಬ್ ಧರಿಸಿದರೆ ಎಸ್ಸೆಸೆಲ್ಸಿ ಪರೀಕ್ಷೆಗೆ ಅವಕಾಶವಿಲ್ಲ ಎಂಬ ಸರಕಾರದ ಆದೇಶ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ತಂದೆ-ತಾಯಿ ಇರಬಹುದು, ಸರ್ಕಾರ ಇರಬಹುದು ಅವರ ಶಿಕ್ಷಣದ ಬಗ್ಗೆ ಗಮನಹರಿಸಬೇಕು. ಮಕ್ಕಳು ತಪ್ಪು ಮಾಡಬಹುದು, ಅವರಿಗೆ ಹಠ ಇರಬಹುದು. ಹಾಗಂತ ಅವರ ಭವಿಷ್ಯ ಹಾಳಾಗಲು ಉತ್ತೇಜನ ಕೊಡಬಾರದು. ಕೂತು ಅವರ ಬಳಿ ಮಾತಾಡಿ ಮನವೊಲಿಸಬೇಕು.
ಧರ್ಮಗುರುಗಳು, ತಂದೆ-ತಾಯಂದಿರು, ಶಿಕ್ಷಕರ ಮೂಲಕ ಮಕ್ಕಳಿಗೆ ತಿಳಿ ಹೇಳಿಸಬೇಕು. ಏಕೆಂದರೆ ಮಕ್ಕಳು ಶಿಕ್ಷಕರ ಮಾತನ್ನು ಗೌರವ ಕೊಟ್ಟು ಕೇಳುತ್ತಾರೆ. ತಾಯಿ ಮೊದಲ ಗುರು. ಶಿಕ್ಷಕರು ಎರಡನೇ ಗುರು. ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಬೇಕೋ ಅದನ್ನು ಮಾಡಬೇಕು ಎಂದರು.
ಶಾಲಾ ಮಕ್ಕಳಿಗೆ ದುಪ್ಪಟ್ಟ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಂವಿಧಾನ ಏನೆಲ್ಲಾ ಹೇಳುತ್ತಾದೋ, ಅಧಿಕಾರ, ಅವಕಾಶ ನೀಡಿದೆಯೋ ಅದರ ಪರವಾಗಿ ಕಾಂಗ್ರೆಸ್ ಇರುತ್ತದೆ. ನಮಗೆ ಅದೇ ಬೈಬಲ್, ಅದೇ ಖುರಾನ್, ಅದೇ ಭಗವದ್ಗೀತೆ. ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ.
ಈಗ ಕೋರ್ಟ್ ತೀರ್ಪು ಕೊಟ್ಟಿದೆ. ಕೆಲವರು ಅದನ್ನು ಒಪ್ಪುತ್ತಾರೆ. ಕೆಲವರು ಅದನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್‌ಗೂ ಹೋಗಬಹುದು. ಇವತ್ತಲ್ಲ ನಾಳೆ ಜಡ್ಜ್ಮೆಂಟ್ ಬರುತ್ತದೆ. ನ್ಯಾಯಾಲಯದ ತೀರ್ಪು ಸರಿ ಇಲ್ಲ ಅಂತ ನಾನು ಹೇಳೋಕೆ ರೆಡಿ ಇಲ್ಲ. ತೀರ್ಪು ತೀರ್ಪೆ. ಯಾರು ಬೇಕಾದರೂ ಹೋಗಿ ಅವರ ವಿಚಾರವನ್ನು ಮಂಡನೆ ಮಾಡಬಹುದು.
ಹಿಜಾಬ್ ಮತ್ತು ಸ್ವಾಮೀಜಿಗಳ ಶಿರಾವಸ್ತ್ರದ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದಾಗ, ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ಬಗ್ಗೆ ಅವರೇ ಉತ್ತರ ಕೊಡ್ತಾರೆ. ಈಗಾಗಲೇ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅವರಿಗೆ ಎಲ್ಲ ಧರ್ಮಗಳು, ಧರ್ಮಪೀಠಗಳು, ಸ್ವಾಮೀಜಿಗಳ ಬಗ್ಗೆ ಅಪಾರ ಗೌರವ ಇದೆ. ಅವರು ಸಿಎಂ ಆಗಿದ್ದಾಗ ಎಲ್ಲ ಧರ್ಮ ಪೀಠಗಳಿಗೆ ಅನೇಕ ಸಹಾಯ ಮಾಡಿದ್ದಾರೆ. ಅವರು ಏನು ಮಾತಾಡಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡ್ತಾರೆ ಎಂದರು.