Bengaluru

ಬಿಬಿಎಂಪಿ ಕಸದ ಲಾರಿಗೆ ಸಿಕ್ಕಿ ಬಾಲಕಿ ಸಾವು ಪ್ರಕರಣ: ಬಾಲಕಿ ಪೋಷಕರಿಗೆ 8ಲಕ್ಷ ಪರಿಹಾರ ಚೆಕ್‌ ವಿತರಣೆ

ಬೆಂಗಳೂರು: ಹೆಬ್ಬಾಳದ ಬಳಿ ರಸ್ತೆ ದಾಟುವ ವೇಳೆ ಪಾಲಿಕೆಯ ಕಸದ ಲಾರಿ ಡಿಕ್ಕಿಯಿಂದ ಮೃತಪಟ್ಟ ಬಾಲಕಿ ಅಕ್ಷಯಾ ರವರ ಪೋಷಕರಾದ ತಂದೆ ನರಸಿಂಹಮೂರ್ತಿ ಹಾಗೂ ತಾಯಿ ಗೀತಾ ರವರಿಗೆ ಇಂದು ಪಾಲಿಕೆಯಿಂದ 5 ಲಕ್ಷ ರೂ, ಸ್ಥಳೀಯ ಶಾಸಕರಾದ ಶ್ರೀ ಭೈರತಿ ಸುರೇಶ್ ರವರಿಂದ 3 ಲಕ್ಷ ರೂ. ಸೇರಿದಂತೆ 8 ಲಕ್ಷ ರೂ. ಪರಿಹಾರ ಚೆಕ್ ಅನ್ನು ವಿತರಿಸಲಾಗಿದೆ. ಇದಲ್ಲದೆ ಕಸದ ಲಾರಿ ಮಾಲೀಕರಿಂದ 2 ಲಕ್ಷ ರೂ. ಹಣವನ್ನು ಪೋಷಕರಿಗೆ ನೀಡಲಾಗುವುದು ಎಂದು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ತಿಳಿಸಿದರು.

ಚೆಕ್ ವಿತರಣೆ ಬಳಿಕ ಮಾತನಾಡಿದ ಅವರು, ಹೆಬ್ಬಾಳದ ಬಸ್ ನಿಲ್ದಾಣದ ಬಳಿ ದಿನಾಂಕ: 21-03-2022 ರಂದು ಆಕಸ್ಮಿಕವಾಗಿ ನಡೆದ ದುರ್ಘಟನೆ ಸಂಭವಿಸಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ನಾವು ಮತ್ತಷ್ಟು ಜಾಗರೂಕತೆಯಿಂದಿರಬೇಕಿದೆ. ಘಟನೆ ನಡೆದಿರುವ ಸ್ಥಳದ ಬಳಿಯೇ ಕಳೆದ 8 ತಿಂಗಳ ಹಿಂದೆ ಪಾದಚಾರಿ ಮೇಲುಸೇತುವೆಯನ್ನು ಉದ್ಘಾಟಿಸಿದ್ದು, ಅದನ್ನು ಬಳಕೆಯಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕು. ಪಾದಚಾರಿ ಕೆಳ ಸೇತುವೆಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ಸರಿಯಾಗಿ ನಿರ್ವಹಣೆ ಮಾಡದಿರುವ ಅಧಿಕಾರಿಯ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮೃತ ಬಾಲಕಿಯ ಪೋಷಕರಿಗಿರುವ ಉಳಿದ 2 ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲು ವ್ಯವಸ್ಥೆಗೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರು(ಪೂರ್ವ) ಮನೋಜ್ ಜೈನ್, ವಲಯ ಜಂಟಿ ಆಯುಕ್ತರಾದ ಶಿಲ್ಪಾ ಹಾಗು ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share Post