ಉಕ್ರೇನ್-ರಷ್ಯಾ ಯುದ್ಧ; ಚೀನಾದಿಂದ ಆರ್ಥಿಕ, ಸೇನೆ ನೆರವು ಕೋರಿತಾ ರಷ್ಯಾ..?
ವಾಷಿಂಗ್ಟನ್: ಉಕ್ರೇನ್ ಚಿಕ್ಕ ದೇಶವಾದ್ದರಿಂದ ಬಹುಬೇಗ ಅದು ಸೋಲು ಒಪ್ಪಿಕೊಳ್ಳುತ್ತದೆ ಎಂದು ಭಾವಿಸಿದ್ದ ರಷ್ಯಾಗೆ ನಿಜ ಸ್ಥಿತಿ ಅರಿವಾಗಿದೆ. ಯಾವುದೇ ಕಾರಣಕ್ಕೂ ಸೋಲೊಪ್ಪಿಕೊಳ್ಳುವುದಿಲ್ಲ ಎಂದು ಉಕ್ರೇನ್ ಹೋರಾಟ ಮುಂದುವರೆಸಿದೆ. ಈ ಬೆನ್ನಲ್ಲೇ ರಷ್ಯಾ ಸೇನೆ ಮತ್ತು ಆರ್ಥಿಕ ನೆರವು ನೀಡುವಂತೆ ಚೀನಾಗೆ ಮನವಿ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ವಿರುದ್ಧದ ಹೋರಾಟಕ್ಕೆ ಸೇನಾ ಸಲಕರಣೆಗಳನ್ನು ಒದಗಿಸುವಂತೆ ಚೀನಾವನ್ನು ರಷ್ಯಾ ಕೋರಿದೆ. ಅಷ್ಟೇ ಅಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಂದಾಗಿ ಹಲವು ಸಮಸ್ಯೆಗಳು ಎದುರಾಗಿದೆ. ಅದರಿಂದ ಪಾರಾಗಲು ಆರ್ಥಿಕ ನೆರವು ನೀಡುವಂತೆ ಚೀನಾವನ್ನು ರಷ್ಯಾ ಕೋರಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ರಷ್ಯಾವು ನಿರ್ದಿಷ್ಟವಾಗಿ ಯಾವುದಕ್ಕೆ ಬೇಡಿಕೆ ಇಟ್ಟಿದೆ, ಚೀನಾ ಅದಕ್ಕೆ ಪ್ರತಿಕ್ರಿಯೆ ನೀಡಿದೆಯೇ ಎಂಬ ಕುರಿತು ಹೆಚ್ಚಿನ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.