CrimeNational

ಭಾಗಲ್ಪುರ್‌ ಕಟ್ಟಡ ಬ್ಲಾಸ್ಟಿಂಗ್‌ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆ-ಎಟಿಎಸ್‌ಗೆ ತನಿಖೆಯ ಹೊಣೆ

ಬಿಹಾರ:   ಭಾಗಲ್ಪುರ್ ಪ್ರದೇಶದ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಉಂಟಾದ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು 14 ಜನರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಐವರು ಸೇರಿದ್ದಾರೆ. ಸ್ಫೋಟದ ಕುರಿತು ಎಟಿಎಸ್ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಪಘಾತದ ಸಂಭವನೀಯ ಕಾರಣಗಳನ್ನು ಚರ್ಚಿಸಿದ್ದಾರೆ.  ಗಾಯಾಳುಗಳನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಸ್ಫೋಟದ ಪರಿಣಾಮ ತೀವ್ರವಾಗಿದ್ದು, ಮೂರು ಮನೆಗಳು ಬಿರುಕು ಬಿಟ್ಟಿವೆ. ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಸ್ಥಳೀಯ ಪ್ರಭಾರಿ ಸುಧಾಂಶುಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಘಟನೆ ಕುರಿತು ಬಿಹಾರ ಡಿಜಿಪಿ ಎಸ್‌ಕೆ ಸಿಬ್ಘಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಅನುಮತಿ ಪಡೆಯದೇ ಮನೆ ಬಾಡಿಗೆ ಪಡೆದು ಪಟಾಕಿ ತಯಾರು ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎಟಿಎಸ್ ತನಿಖೆ ನಡೆಸುತ್ತಿದೆ ಮತ್ತು ಪ್ರಸ್ತುತ ಘಟನಾ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಕಚ್ಚಾ ಬಾಂಬ್‌ಗಳು, ಪಟಾಕಿ ತಯಾರಿಕೆಗೆ ಬಳಸುವ ಪುಡಿ ಮತ್ತು ಕಬ್ಬಿಣದ ಮೊಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಂದ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದರು. ತನಿಖೆ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲೆ ನಿಗಾ ಇರಿಸಲಾಗಿದೆ. ಶುಕ್ರವಾರ ನಡೆದ ಘಟನೆಯ ಬಗ್ಗೆ ಪ್ರಧಾನಿ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಟ್ವೀಟ್ ಮಾಡಿ ಭಾಗಲ್ಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರಿಗೆ ಸಂತಾಪಗಳನ್ನು ತಿಳಿಸಿದ್ದಾರೆ  ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

 

Share Post